ಜಿಲ್ಲೆ

ಬಸ್​ ಬರದಿದ್ರೂ ನೀವು ಪರೀಕ್ಷೆಗೆ ಬರಲೇಬೇಕು; ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ತಾಕೀತು

ಮೈಸೂರು/ಶಿವಮೊಗ್ಗ: ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರು ನಾಳೆಯಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದು, ನಾಳೆಯಿಂದ ಅನಿವಾರ್ಯವಾಗಿ ಹೊರಗಡೆ ಹೋಗಲೇಬೇಕಾದ ಕೆಲಸ ಇರುವ ಹಲವರು ಇಂದೇ ಚಿಂತೆಗೊಳಗಾಗಿದ್ದರೆ. ಈ ಮಧ್ಯೆ ಸಾರಿಗೆ ನೌಕರರ ಮುಷ್ಕರ ವಿಶ್ವವಿದ್ಯಾಲಯವೊಂದರ ವಿದ್ಯಾರ್ಥಿಗಳನ್ನೂ ಚಿಂತೆಗೀಡು ಮಾಡಿದೆ.

ಬಸ್​ ಬರದೇ ಇದ್ದರೂ ವಿದ್ಯಾರ್ಥಿಗಳು ಪರೀಕ್ಷೆಗೆ ಬರಲೇಬೇಕು ಎಂದು ವಿಶ್ವವಿದ್ಯಾಲಯ ಸ್ಪಷ್ಟಪಡಿಸಿದೆ. ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಪರೀಕ್ಷೆ ಇದ್ದು, ಈಗಾಗಲೇ ವೇಳಾಪಟ್ಟಿ ಕೂಡ ಪ್ರಕಟವಾಗಿದೆ. ಆದರೆ ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಪರೀಕ್ಷಾ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈಗಾಗಲೇ ನಿಗದಿ ಆಗಿರುವ ವೇಳಾಪಟ್ಟಿ ಪ್ರಕಾರವೇ ಪರೀಕ್ಷೆ ನಡೆಯಲಿದೆ ಎಂದು ಮೈಸೂರು ವಿಶ್ವವಿದ್ಯಾಲಯ ಸ್ಪಷ್ಟಪಡಿಸಿದೆ.

ಏಕಾಏಕಿ ಪರೀಕ್ಷೆಯನ್ನು ಮುಂದೂಡಿದರೆ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಲಿದೆ. ಹಾಗಾಗಿ ಎಂದಿನಂತೆ ಪದವಿ ಪರೀಕ್ಷೆಗಳು ನಡೆಯಲಿವೆ ಎಂಬುದಾಗಿ ಮೈಸೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಎ.ಟಿ. ಜ್ಞಾನಪ್ರಕಾಶ್ ತಿಳಿಸಿದ್ದಾರೆ. ಹೀಗಾಗಿ ಬಸ್​ ಬರದೇ ಇದ್ದರೂ ಬೇರೆ ವ್ಯವಸ್ಥೆ ಮಾಡಿಕೊಂಡು ವಿದ್ಯಾರ್ಥಿಗಳು ಪರೀಕ್ಷೆಗೆ ಹೋಗಬೇಕಾದ್ದು ಅನಿವಾರ್ಯವಾಗಿದೆ.

ಕುವೆಂಪು ವಿಶ್ವವಿದ್ಯಾಲಯದ್ದೂ ಇದೇ ನಿಲುವು: ಕುವೆಂಪು ವಿಶ್ವವಿದ್ಯಾಲಯದಿಂದ ಏ. 7ರಂದು ನಡೆಯಲಿರುವ ಪರೀಕ್ಷೆಗಳ ಮುಂದೂಡಿಕೆ ಇಲ್ಲ ಎಂದು ವಿವಿ ಸ್ಪಷ್ಟನೆ ನೀಡಿದೆ. ನಾಳೆಯಿಂದ ಕೆಎಸ್​ಆರ್​ಟಿಸಿ ನೌಕರರ ಮುಷ್ಕರ ಪ್ರಾರಂಭವಾಗಲಿದ್ದರೂ, ಏ. 07ರಂದು ನಿಗದಿಯಾಗಿರುವ ವಿಶ್ವವಿದ್ಯಾಲಯದ ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳು ವೇಳಾಪಟ್ಟಿ ಪ್ರಕಾರವೇ ನಡೆಯಲಿವೆ ಎಂದು ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಪಿ. ಕಣ್ಣನ್ ಸ್ಪಷ್ಟಪಡಿಸಿದ್ದಾರೆ.

ಸಾರಿಗೆ ನೌಕರರ ಮುಷ್ಕರ ಅನಿರ್ದಿಷ್ಟಾವಧಿಯದ್ದಾಗಿದ್ದು, ಮುಷ್ಕರ ಮುಂದುವರಿಯುವವರೆಗೆ ಪರೀಕ್ಷೆಗಳನ್ನು ಮುಂದೂಡಲು ಸಾಧ್ಯವಾಗುವುದಿಲ್ಲ. ಇನ್ನು‌ ಪರೀಕ್ಷೆಗಳನ್ನು ಮುಂದೂಡಬೇಕೆಂದು ಪದವಿ ಕಾಲೇಜುಗಳ ಯಾವುದೇ ಪ್ರಾಂಶುಪಾಲರಿಂದ ಮನವಿ ಕೂಡ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಪರೀಕ್ಷೆಗಳು ಎಂದಿನಂತೆ ನಡೆಯಲಿವೆ ಎಂದು ಎಂದು ಅವರು ಖಚಿತಪಡಿಸಿದ್ದಾರೆ. ನಾಳಿನ‌ ಪರಿಸ್ಥಿತಿ ಬಗ್ಗೆ ಕುಲಪತಿಗಳೊಂದಿಗೆ ಸಮಾಲೋಚನೆ ನಡೆಸಿ, ಮುಂದಿನ ಪರೀಕ್ಷೆಗಳ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದೂ ತಿಳಿಸಿದ್ದಾರೆ.