ವಿಜಯವಾಣಿ ಸುದ್ದಿಜಾಲ ಕೊಕ್ಕಡ
ಕಳೆದ ಮಂಗಳವಾರ ಕಟ್ಟಿಗೆ ತರಲೆಂದು ಮನೆ ಸಮೀಪದ ಗುಡ್ಡೆಗೆ ಹೋಗಿದ್ದ ಶಿಬಾಜೆ ಗ್ರಾಮದ ಐಂಗುಡ ನಿವಾಸಿ ವಾಸು ರಾಣ್ಯ(83) ಭಾನುವಾರ ಪತ್ತೆಯಾಗಿದ್ದು, ಆರು ದಿನಗಳ ಬಳಿಕ ತಮ್ಮ ಮನೆ ಸೇರಿಕೊಂಡಿದ್ದಾರೆ. ಆ ಮೂಲಕ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ.
ಶಿಬಾಜೆ ಗ್ರಾಮದ ವಾಸು ರಾಣ್ಯ ಎಂಬುವರು ಮೇ 21ರ ಬೆಳಗ್ಗೆ ಕೈಯಲ್ಲೊಂದು ಕತ್ತಿ ಹಿಡಿದು, ಮನೆ ಸಮೀಪವಿರುವ ಗುಡ್ಡಕ್ಕೆ ತೆರಳಿದ್ದರು. ಕಟ್ಟಿಗೆ ತರಲು ಹೋಗಿರಬಹುದು ಎಂದು ಮನೆಯವರು ಸುಮ್ಮನಿದ್ದರು. ಮಧ್ಯಾಹ್ನದವರೆಗೂ ವಾಸು ರಾಣ್ಯ ಮನೆಗೆ ಬರದೇ ಇದ್ದಾಗ, ಸ್ಥಳೀಯರ ಜೊತೆ ಹುಡುಕಾಟ ನಡೆಸಿದರು. ಐದು ದಿನಗಳ ಕಾಲ ಸುತ್ತಮುತ್ತ ಹುಡುಕಿದರೂ ವಾಸು ರಾಣ್ಯ ಪತ್ತೆಯಾಗಿರಲಿಲ್ಲ.
ಭಾನುವಾರ ಬೆಳಗ್ಗೆ ಮನೆಯವರು ಆಡು ಮೇಯಿಸಲೆಂದು ಮನೆ ಸಮೀಪವಿರುವ ಗುಡ್ಡೆಗೆ ತೆರಳಿದಾಗ ಕೂ…ಕೂ…ಎಂಬ ಶಬ್ದ ಕೇಳಿ ಬಂತು. ಸದ್ದಿನ ಜಾಡು ಹಿಡಿದು ಸ್ಥಳೀಯರು ಮತ್ತು ಶೌರ್ಯ ವಿಪತ್ತು ತಂಡದವರು ಹುಡುಕಾಟ ನಡೆಸಿದಾಗ ಮನೆಯ ಮೇಲಿನ ಭಾಗದ ಭಂಡಿಹೊಳೆ ಕಾಡಿನ ಸುಮಾರು 2.5 ಕಿ. ಮೀ. ದೂರದಲ್ಲಿ ವಾಸು ರಾಣ್ಯ ಪತ್ತೆಯಾಗಿದ್ದಾರೆ. ಬಳಿಕ ಅವರನ್ನು ಕೊಕ್ಕಡ ಸಮುದಾಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಯಿತು.
ವಾಸು ರಾಣ್ಯ ಆರೋಗ್ಯವಾಗಿದ್ದು, ತನ್ನನ್ನು ಯಾರೋ ಬಾ ಬಾ ಎಂದು ಕರೆದಂತಾಯಿತು. ಹಾಗಾಗಿ ಧ್ವನಿಯ ಹಿಂದೆ ನಾನು ಹೋದೆ. ಆಹಾರವನ್ನೇನೂ ತಾನು ತೆಗೆದುಕೊಳ್ಳದೆ ಕೇವಲ ನೀರು ಮಾತ್ರ ಕುಡಿಯುತ್ತಿದ್ದೆ ಎಂದು ಕನವರಿಕೆಯಂತೆ ಹೇಳುತ್ತಿದ್ದಾರೆ. ವಾಸು ರಾಣ್ಯ ನಾಪತ್ತೆಯಾದ ದಿನ ಈ ಪರಿಸರದಲ್ಲಿ ವಿಪರೀತ ಗುಡುಗು ಮಿಂಚು ಮಳೆ ಬಂದಿದ್ದರೂ ಆ ಸಮಯದಲ್ಲಿ ಒಬ್ಬಂಟಿಯಾಗಿ ಕಾಡಲ್ಲೇ ಇದ್ದರು ಎನ್ನಲಾಗಿದೆ. ಅವರನ್ನು ಪತ್ತೆಹಚ್ಚಿದ ಸ್ಥಳದಲ್ಲಿ ಎಲೆಗಳನ್ನು ರಾಶಿಹಾಕಲಾಗಿತ್ತು.
ವಾಸು ಅವರನ್ನು ಪತ್ತೆಹಚ್ಚುವ ಕಾರ್ಯಾಚರಣೆಯಲ್ಲಿ ಶೌರ್ಯ ವಿಪತ್ತು ತಂಡದ ಅವಿನಾಶ್ ಭಿಡೆ, ಶೀನಪ್ಪ, ಗಂಗಾಧರ ಶಿಶಿಲ, ಕುಶಾಲಪ್ಪ ಶಿಶಿಲ, ಪ್ರವೀಣ್ ಪತ್ತಿಮಾರು, ಮತ್ತು ಸ್ಥಳೀಯರಾದ ಗೋವಿಂದ, ಗಣೇಶ್, ಸುರೇಶ, ಪುನೀತ್, ಶರತ್, ಶಶಿಕಾಂತ್, ವಿಶ್ವನಾಥ್, ಕೃಷ್ಣ ನಾಯ್ಕ,ಮತ್ತು ವಾಸು ರಾಣ್ಯರ ಪುತ್ರರಾದ ಕಮಲಾಕ್ಷ ಮತ್ತು ಸುರೇಶ್ ಮತ್ತು ರಾಣ್ಯ ಕುಟುಂಬಸ್ಥರು ಸಹಕರಿಸಿದರು.