ಮೂಲ್ಕಿ: ಗ್ರಾಮೀಣ ಪರಿಸರವನ್ನು ಸ್ವಚ್ಛವಾಗಿರಿಸಿಕೊಂಡು ಮೌಲ್ಯವರ್ಧಿತ ಗಿಡಗಳನ್ನು ಬೆಳೆಸುವ ಮೂಲಕ ಪರಿಸರ ರಕ್ಷಣೆ ಜತೆಗೆ ಆರ್ಥಿಕ ಅಭಿವೃದ್ಧಿ ಸಾಧ್ಯ ಎಂದು ಸ್ಪಂದನ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಕಕ್ವಗುತ್ತು ಭಾನುಮತಿ ಶೆಟ್ಟಿ ಹೇಳಿದರು.
ರೋಟರಿ ಕ್ಲಬ್ ಒದಗಿಸಿದ ಗಿಡಗಳನ್ನು ಅತಿಕಾರಿಬೆಟ್ಟು ಗ್ರಾಮಸ್ಥರಿಗೆ ಸೋಮವಾರ ವಿತರಿಸಿ ಮಾತನಾಡಿದರು.
ಸಾವಯವ ಕೃಷಿ ಪದ್ಧತಿಯ ಒಲವಿನಿಂದ ಹೈನುಗಾರಿಕೆ ಹೆಚ್ಚಳ ಜತೆಗೆ ಫಲವಸ್ತುಗಳ ಗಿಡಗಳ ತೋಟಗಾರಿಕೆಯಿಂದ ಗ್ರಾಮೀಣ ವಲಯದಲ್ಲಿ ಆರ್ಥಿಕ ಅಭಿವೃದ್ಧಿ ಸಾಧ್ಯವಿದೆ. ಶುದ್ಧ ನೀರು ಮತ್ತು ಪರಿಸರವನ್ನು ಮುಂದಿನ ತಲೆಮಾರಿಗೆ ನೀಡಲು ಇದರಿಂದ ಸಾಧ್ಯ ಎಂದರು.
ಅತಿಕಾರಿಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷ ಮನೋಹರ್ ಕೋಟ್ಯಾನ್, ಪಿಡಿಒ ಶೈಲಜಾ, ಕೃಷಿ ಅಧಿಕಾರಿ ಷಣ್ಮುಗಂ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.