ವಿಜಯಪುರ: ಗಂಟೆಯ ಕಾಲ ಮಳೆ ಸುರಿದು ನಿಂತ ಬೆನ್ನಲ್ಲೇ ಭೂಮಿ ಕಂಪಿಸಿರುವ ಘಟನೆ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಜನರೆಲ್ಲರೂ ಭಯ ಭೀತರಾಗಿದ್ದು, ಮನೆಯಿಂದ ಹೊರಗೆ ಓಡಿ ಬಂದಿರುವುದಾಗಿ ಹೇಳಲಾಗಿದೆ.
ಉಕ್ಕಲಿ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನದ ವೇಳೆ ಸುಮಾರು ಒಂದು ಗಂಟೆಗಿಂತ ಹೆಚ್ಚು ಕಾಲ ಮಳೆಯಾಗಿದೆ. ಸಂಜೆ 5 ಗಂಟೆಯ ಹೊತ್ತಿಗೆ ಮಳೆ ನಿಂತಿದ್ದು, ಒಮ್ಮೆಲೆ ಭೂಮಿ ಕಂಪಿಸಿದೆ. ಗ್ರಾಮಸ್ಥರೆಲ್ಲರಿಗೂ ಭೂಕಂಪನದ ಅನುಭವವಾಗಿದ್ದು, ಭಯದಿಂದ ಮನೆಯ ಹೊರಗೆ ಓಡಿ ಬಂದಿದ್ದಾರೆ.
ಗ್ರಾಮದಲ್ಲಿ ಈ ಹಿಂದೆಯೂ ಕೂಡ ಆಗಾಗ ಭೂಮಿ ಕಂಪಿಸಿದ ಅನುಭವ ಆಗುತ್ತಿತ್ತು ಎಂದು ಗ್ರಾಮಸ್ಥರು ಹೇಳಿದ್ದಾರೆ. ಕಳೆದ ತಿಂಗಳು ಸಹ ಬಸವನ ಬಾಗೇವಾಡಿ ತಾಲೂಕಿನ ವಿವಿಧೆಡೆ ಲಘು ಭೂಕಂಪನದ ಅನುಭವವಾಗಿದ್ದು, ಜನರು ಆತಂಕಕ್ಕೆ ಈಡಾಗಿದ್ದರು.