ಬಾಗಲಕೋಟೆ: ಕುಡಿದ ಮತ್ತಲ್ಲಿ ಮನೆಯಲ್ಲಿ ಜಗಳ ಮಾಡಿಕೊಂಡು ಬೇಸರಗೊಂಡ ವ್ಯಕ್ತಿಯೊಬ್ಬ ಮೊಬೈಲ್ಪೋನ್ ಟವರ್ ಏರಿ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದಷ್ಟೇ ಅಲ್ಲದೆ ಕೆಲವರಿಗೆ ಮನರಂಜನೆ ಕೇಂದ್ರವಾಗಿ ಕಂಡುಬಂದ. ಮತ್ತೊಂದೆಡೆ ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳದವರಿಗೆ ಈತ ಕೆಲಕಾಲ ತಲೆನೋವಾಗಿ ಕಾಡಿದ ಪ್ರಸಂಗವೊಂದು ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಗಿರಿಸಾಗರದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಇಲ್ಲಿನ ಹನಮಂತ ಎಂಬ ವ್ಯಕ್ತಿ ಇಂಥದ್ದೊಂದು ಅವಾಂತರ ಮಾಡಿಕೊಂಡಿದ್ದಾನೆ. ಪಾನಮತ್ತನಾಗಿ ಬಂದು ಮನೆಯಲ್ಲಿ ಜಗಳವಾಡಿದ ಈತ ಬಳಿಕ ಸಮೀಪದ ಮೊಬೈಲ್ಫೋನ್ ಟವರ್ ಏರಿದ್ದಾನೆ.
ಈತ ಟವರ್ ಏರಿ ಕುಳಿತು ಕೆಳಗೆ ಬರಲು ನಿರಾಕರಿಸಿದ್ದರಿಂದ ಸ್ಥಳೀಯರು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹನಮಂತನನ್ನು ಕೆಳಗಿಳಿಸಲು ಸುಮಾರು ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಬೇಕಾಯಿತು. ಕೊನೆಗೂ ಈತನ ಮನವೊಲಿಸುವಲ್ಲಿ ಯಶಸ್ವಿಯಾದ ಸಿಬ್ಬಂದಿ, ಹಗ್ಗ ಕಟ್ಟಿ ಈತನನ್ನು ಕೆಳಕ್ಕೆ ಇಳಿಸಿದ್ದಾರೆ. ಈ ಮೂಲಕ ಸ್ಥಳೀಯರು ನಿಟ್ಟುಸಿರು ಬಿಡುವಂತಾಯಿತು.