ಜಿಲ್ಲೆ

ಗನ್​ ಹಿಡಿದು ಬ್ಯಾಂಕ್​ಗೆ ನುಗ್ಗಿದ್ದ ಕುಡುಕನ ಕಿತಾಪತಿ ಅಷ್ಟಿಷ್ಟಲ್ಲ!

ಕಲಬುರಗಿ: ಹಾಡಹಗಲೇ ನಕಲಿ ಗನ್​ ಹಿಡಿದು ಐಸಿಐಸಿಐ ಬ್ಯಾಂಕ್​ಗೆ ಎಂಟ್ರಿ ಕೊಟ್ಟ ವ್ಯಕ್ತಿಯೊಬ್ಬ ಕೆಲಕಾಲ ಆತಂಕ ಸೃಷ್ಟಿಸಿದ್ದ ಘಟನೆ ನಗರದಲ್ಲಿ ಶನಿವಾರ ಸಂಭವಿಸಿದೆ.

ಮದ್ಯದ ಅಮಲಿನಲ್ಲಿ ಗಂಜ್‌ನ ಐಸಿಐಸಿಐ ಬ್ಯಾಂಕ್ ಒಳಗೆ ನುಗ್ಗಿದ ಕುಡುಕನೊಬ್ಬ ಕುರ್ಚಿ ರಿಪೇರಿ ಮಾಡುವ ನೆಪದಲ್ಲಿ ಬ್ಯಾಂಕ್‌ನ‌ ಡೆಪ್ಯೂಟಿ ಬ್ರ್ಯಾಂಚ್ ಮ್ಯಾನೇಜರ್ ಚೇಂಬರ್ ಹೊಕ್ಕಿದ್ದ.

ಬ್ಯಾಂಕ್​ನ ಡಿಬಿಎಂ, ತಾವು ಯಾವುದೇ ಚೇರ್ ರಿಪೇರಿ ಇದೆ ಅಂತಾ ಹೇಳಿಲ್ಲ. ಆದರೂ ನೀವೇಕೆ ಬಂದ್ರಿ? ನಿಜಕ್ಕೂ ನೀನ್ಯಾರು ಎಂದು ಪ್ರಶ್ನಿಸಿದ್ದಾರೆ. ಕೂಡಲೇ ಆತನ ಬಗ್ಗೆ ಅನುಮಾನ ಬಂದು ಬ್ರ್ಯಾಂಚ್ ಮ್ಯಾನೇಜರ್​ಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಬ್ಯಾಂಕ್​ ಒಳಗೆ ಅಪರಿಚಿತ ನುಗ್ಗಿರುವ ಬಗ್ಗೆ ತಕ್ಷಣ ಬ್ರ್ಯಾಂಚ್ ಮ್ಯಾನೇಜರ್​ರಿಂದ ಪೊಲೀಸರಿಗೆ ಮಾಹಿತಿ ಹೋಗಿದ್ದು, ಸ್ಥಳಕ್ಕೆ ಬಂದ ಪೊಲೀಸರು ದುಷ್ಕರ್ಮಿಗೆ ಲಾಠಿ ‌ರುಚಿ ತೋರಿಸಿದರು.

ನಕಲಿ ಗನ್​ ಹಿಡಿದು ಬ್ಯಾಂಕ್​ಗೆ ಬಂದ ವ್ಯಕ್ತಿಯನ್ನು ಕಲಬುರಗಿಯ ಮಿಜಗುರಿ ನಿವಾಸಿ ಸುಲ್ತಾನ್‌ ಎಂದು ಗೊತ್ತಾಗಿದೆ. 'ಎಣ್ಣೆ'ನಶೆಯಲ್ಲಿ ಬ್ಯಾಂಕ್​ಗೆ ನುಗ್ಗಿದ್ದ ಹಿನ್ನೆಲೆಯಲ್ಲಿ ಬ್ಯಾಂಕ್ ಸಿಬ್ಬಂದಿ ದೂರು ದಾಖಲಿಸಿಲ್ಲ. ಆದರೆ, ಸುಲ್ತಾನ್‌ ಮನೆಯವರಿಂದ ಚೌಕ್ ಪೊಲೀಸರು ಮುಚ್ಚಳಿಕೆ ಬರೆಸಿಕೊಂಡು‌ ಆತನನ್ನು ಬಿಡುಗಡೆ ಮಾಡಿದ್ದಾರೆ.