ಕಾಸರಗೋಡು: ಉಪ್ಪಳ ಕೋಡಿಬೈಲು ಮಣ್ಣಂಗುಳಿಯ ತೆಕ್ಕೇಕುನ್ನು ಎಂಬಲ್ಲಿ ಅಬಕಾರಿ ದಳ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಮಾದಕ ಪದಾರ್ಥ ಹ್ಯಾಶಿಶ್ ಆಯಿಲ್ ಸಾಗಿಸುತ್ತಿದ್ದ ಬಂಟ್ವಾಳ ಮಡುಕುಂಜೆ ನಿವಾಸಿ, ಪ್ರಸಕ್ತ ಮಣ್ಣಂಗುಳಿ ತೆಕ್ಕೇಕುನ್ನುವಿನಲ್ಲಿ ವಾಸಿಸುತ್ತಿರುವ ಕಲಂದರ್‌ಶಾಫಿ ಎಂಬಾತನನ್ನು ಬಂಧಿಸಿದ್ದಾರೆ. ಈತನಿಂದ 130 ಗ್ರಾಂ ಆ್ಯಶಿಶ್ ಆಯಿಲ್ ವಶಪಡಿಸಿಕೊಳ್ಳಲಾಗಿದೆ. ಮಾದಕ ದ್ರವ್ಯ ಸಾಗಾಟಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಈತನ ಜತೆಗಿದ್ದ ಬಡಾಜೆ ನಿವಾಸಿ ಮೊಯ್ದೀನ್ ಯಾಸಿರ್ ಎಂಬಾತ ಪರಾರಿಯಾಗಿದ್ದು, ಈತನ ಮನೆಗೆ ದಾಳಿ ನಡೆಸಿ ತಪಾಸಣೆ ನಡೆಸಿದಾಗ 320 ಗ್ರಾಂ ಆ್ಯಶಿಶ್ ಆಯಿಲ್ ಪತ್ತೆಯಾಗಿದೆ. ಇದನ್ನು ವಶಪಡಿಸಿಕೊಂಡು ಕೇಸು ದಾಖಲಿಸಿಕೊಳ್ಳಲಾಗಿದೆ. ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ದಳ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.