ವಿಜಯವಾಣಿ ಸುದ್ದಿಜಾಲ ಸುಳ್ಯ
ನಗರದಲ್ಲಿ ಕುಡಿಯುವ ನೀರಿನ ಯೋಜನೆಯ ಅನುಷ್ಠಾನ ಸಂದರ್ಭ ಡಾಂಬರು, ಕಾಂಕ್ರೀಟ್ ರಸ್ತೆಗಳನ್ನು, ರಸ್ತೆ ಬದಿ ಅಳವಡಿಸಿರುವ ಇಂಟರ್‌ಲಾಕನ್ನು ಇನ್ನೂ ಸರಿಪಡಿಸಿಲ್ಲ. ಪೈಪ್‌ಲೈನ್ ಕಾಮಗಾರಿ ಪೂರ್ಣಗೊಂಡಲ್ಲೆಲ್ಲ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಬೇಕು ಎಂದು ನಗರ ಪಂಚಾಯಿತಿ ಸದಸ್ಯರು ಒತ್ತಾಯಿಸಿದರು.
ಸುಳ್ಯ ನಗರದಲ್ಲಿ ಅನುಷ್ಠಾನವಾಗುತ್ತಿರುವ ಅಮೃತ್ 2 ಕುಡಿಯುವ ನೀರಿನ ಯೋಜನೆಯ ಪ್ರಗತಿ ಕುರಿತು ನಗರ ಪಂಚಾಯಿತಿ ಸಭಾಭವನದಲ್ಲಿ ಬುಧವಾರ ಒಳಚರಂಡಿ ಮಂಡಳಿ ಇಂಜಿನಿಯರ್‌ಗಳು, ಗುತ್ತಿಗೆದಾರರ ಪ್ರತಿನಿಧಿಗಳ ಸಭೆಯಲ್ಲಿ ನಗರ ಪಂಚಾಯಿತಿ ಸದಸ್ಯರು ಅಸಮಾಧಾನ ಹೊರಹಾಕಿದರು.
ರಸ್ತೆಯಲ್ಲಿ ನಡೆದಾಡಲು ಅಸಾಧ್ಯವಾಗಿದೆ. ನಗರದಲ್ಲಿ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯಿಂದ ಉಂಟಾಗಿರುವ ರಸ್ತೆಗಳ ದುರವಸ್ಥೆ, ಪೈಪ್‌ಲೈನ್ ಕಾಮಗಾರಿ ಪೂರ್ತಿಯಾಗಿಲ್ಲ. ಅಧಿಕಾರಿಗಳು ಹತ್ತು ದಿನದ ಒಳಗಾಗಿ ನೀರಿನ ಯೋಜನೆಯ ಕಾಮಗಾರಿಯಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಸರಿಪಡಿಸಿಕೊಡಬೇಕು ಎಂದು ಸದಸ್ಯ ಎಂ.ವೆಂಕಪ್ಪ ಗೌಡ ಆಗ್ರಹಿಸಿದರು. ಸದಸ್ಯರಾದ ವಿನಯಕುಮಾರ್ ಕಂದಡ್ಕ, ಧೀರಾ ಕ್ರಾಸ್ತಾ, ಶರೀಫ್ ಕಂಠಿ, ಶಿಲ್ಪಾ ಸುದೇವ್, ಕಿಶೋರಿ ಶೇಟ್, ಸಿದ್ದಿಕ್ ಕೊಕ್ಕೊ, ಬಾಲಕೃಷ್ಣ ರೈ, ಸುಧಾಕರ, ಉಪಾಧ್ಯಕ್ಷ ಬುದ್ಧ ನಾಯ್ಕ ದನಿಗೂಡಿಸಿದರು.
ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿಯ ಮಂಗಳೂರು ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತೆ ಶೋಭಾ ಲಕ್ಷ್ಮೀ ಪ್ರತಿಕ್ರಿಯಿಸಿ, ಮಳೆ ಹಾಗೂ ಇತರ ಸಮಸ್ಯೆಗಳಿಂದ ಕಾಮಗಾರಿ ವಿಳಂಬವಾಗಿದೆ. ಕಾಮಗಾರಿ ಪೂರ್ತಿಯಾದ ಭಾಗದಲ್ಲಿ ನೀರಿನ ಸರಬರಾಜು ಆರಂಭಿಸಲು ಯೋಜನೆ ರೂಪಿಸುತ್ತೇವೆ. ಮನೆಗಳಿಗೆ ಸಂಪರ್ಕ ಬಾಕಿ ಇರುವಲ್ಲಿ ಕೂಡಲೇ ಸಂಪರ್ಕ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ನಗರ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಅಧ್ಯಕ್ಷತೆ ವಹಿಸಿ, ಕಡಿದು ಹಾಕಿರುವ ರಸ್ತೆಗಳನ್ನು ಕೂಡಲೇ ಸರಿಪಡಿಸಬೇಕು ಎಂದು ಸೂಚಿಸಿದರು.
ನಗರ ಪಂಚಾಯಿತಿ ಉಪಾಧ್ಯಕ್ಷ ಬುದ್ಧ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಕಿಶೋರಿ ಶೇಟ್, ಮುಖ್ಯಾಧಿಕಾರಿ ಬಸವರಾಜ್, ಕೆಯುಡಬ್ಲ್ಯುಎಸ್ ಸಹಾಯಕ ಇಂಜಿನಿಯರ್ ಶ್ರೀಕಾಂತ್, ಗುತ್ತಿಗೆದಾರ ಕಂಪನಿಯ ಅಬ್ದುಲ್ ನಿಜಾರ್, ಚೇತನ್ ರಾಜ್, ಬಹುಗ್ರಾಮ ಕುಡಿ ನೀರು ಯೋಜನೆಯ ಇಂಜಿನಿಯರ್ ಮಣಿಕಂಠ, ಸಹಾಯಕ ಇಂಜಿನಿಯರ್ ಚೈತ್ರಾ ಉಪಸ್ಥಿತರಿದ್ದರು.
ಸ್ಥಳೀಯ ಸಮಸ್ಯೆಗಳ ಪರಿಶೀಲನೆ
ಸಭೆ ಬಳಿಕ ಇಂಜಿನಿಯರ್ ಶೋಭಾಲಕ್ಷ್ಮೀ, ನಗರ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಮುಖ್ಯಾಧಿಕಾರಿ ಬಸವರಾಜ್, ಸದಸ್ಯರು, ಇಂಜಿನಿಯರ್ ಶಿವಕುಮಾರ್ ಸಹಿತ ತಂಡವು ಕುರುಂಜಿಭಾಗ್ ನೀರಿನ ಟ್ಯಾಂಕ್ ಬಳಿ ಭೇಟಿ ನೀಡಿ ಕಾಮಗಾರಿ ಮತ್ತು ಸ್ಥಳೀಯ ಸಮಸ್ಯೆಗಳ ಬಗ್ಗೆ ಪರಿಶೀಲಿಸಿದರು. ವಿವೇಕಾನಂದ ಸರ್ಕಲ್, ಸುಳ್ಯ ಪೊಲೀಸ್ ಠಾಣೆ ಮುಂಭಾಗ ಆಲಟ್ಟಿ ಕ್ರಾಸ್ ರೋಡ್ ಪ್ರದೇಶಕ್ಕೆ ತೆರಳಿ ರಸ್ತೆ ಸಮಸ್ಯೆಗಳ ಪರಿಶೀಲಿಸಿ ಶೀಘ್ರವೇ ದುರಸ್ತಿಗೊಳಿಸುವ ಭರವಸೆ ನೀಡಿದರು.
ಜಲ್ಲಿಕಲ್ಲುಗಳಿಂದ ಅಪಾಯ
ನಗರದ ಮುಖ್ಯ ಭಾಗಗಳಾದ ಆಲೆಟ್ಟಿ ಕ್ರಾಸ್ ರೋಡ್, ಗಾಂಧಿನಗರ ಗಾಂಧಿ ಪಾರ್ಕ್ ಬಳಿ, ಪೊಲೀಸ್ ಠಾಣೆಯ ಮುಂಭಾಗ, ವಿವೇಕಾನಂದ ಸರ್ಕಲ್, ರಥಬೀದಿ, ಜಯನಗರ ಮುಂತಾದ ಕಡೆಗಳಲ್ಲಿ ರಸ್ತೆ ಮೇಲೆ ಜಲ್ಲಿ ಕಲ್ಲುಗಳನ್ನು ಸುರಿಯಲಾಗಿದ್ದು, ಅದರಿಂದ ಸ್ಥಳೀಯ ಅಂಗಡಿಯವರಿಗೆ, ವಾಹನ ಸವಾರರಿಗೆ ಸಮಸ್ಯೆ ಉಂಟಾಗುತ್ತಿದೆ ಎಂದು ಸದಸ್ಯರು ದೂರಿದರು.