ಜಿಲ್ಲೆ

ಸುಧಾಕರ್ ಟಿಕೆಟ್​​​ಗಾಗಿ ಕಾಂಗ್ರೆಸ್​ ನಾಯಕರ ಕಾಲಿಗೆ ಬೀಳ್ತಿದ್ದಾನೆ: ಪ್ರದೀಪ್ ಈಶ್ವರ್​

ಚಿಕ್ಕಬಳ್ಳಾಪುರ: ಮಾಜಿ ಸಚಿವ ಡಾ.ಕೆ. ಸುಧಾಕರ್ ಒಬ್ಬ ಅಯೋಗ್ಯ. ಕಾಂಗ್ರೆಸ್​ ಟಿಕೆಟ್​ಗಾಗಿ ಅವರಿವರ ಕಾಲಿಗೆ ಬೀಳುತ್ತಿದ್ದಾನೆ ಎಂದು ಶಾಸಕ ಪ್ರದೀಪ್​ ಈಶ್ವರ್ ಏಕವಚನದಲ್ಲೇ​ ವಾಗ್ದಾಳಿ ನಡೆಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಎಂಪಿ ಟಿಕೆಟ್ ಮಿಸ್ ಆದ್ರೆ, ಕಾಂಗ್ರೆಸ್​ನಿಂದ ಬೆಂಗಳೂರು ಉತ್ತರದಲ್ಲಿ ಸ್ಪರ್ಧೆಗೆ ಸುಧಾಕರ್ ಪ್ರಯತ್ನ ಮಾಡ್ತಿದ್ದಾರೆ. ಬೆಂಗಳೂರು ಉತ್ತರದ ಕಾಂಗ್ರೆಸ್​ ಟಿಕೆಟ್​ಗಾಗಿ ಅವರಿವರ ಕಾಲಿಗೆ ಬೀಳ್ತಿದ್ದಾನೆ ಎಂದು ಶಾಸಕ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರೀತಿಯ ಡಬ್ಬಲ್‍ಗೇಂ ಏಕೆ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷದಲ್ಲಿದ್ದು, ಮೋಸ ಮಾಡಿ ಹೋದರು. ಇದರ ಪರಿಣಾಮ ನನ್ನಂತಹ ಸಾಮಾನ್ಯ ಹುಡುಗ ಅವರನ್ನು ಚುನಾವಣೆಯಲ್ಲಿ ಸೋಲಿಸುವಂತಾಯಿತು. ಇದ್ದರೆ ನೆಟ್ಟಗೆ ಬಿಜೆಪಿಯಲ್ಲಿ ಇರಿ. ಭವಿಷ್ಯವಾದರೂ ಇರುತ್ತದೆ. ಅದನ್ನು ಬಿಟ್ಟು ಕಾಂಗ್ರೆಸ್‍ಗೆ ಬಂದರೆ ನಮ್ಮ ಪಕ್ಷದ ಕಚೇರಿಯ ಹೊರಗೆ ಇಟ್ಟಿರುವ ಕಸದ ಬುಟ್ಟಿಗಿಂತಲೂ ಕಡೆಯಾಗಿ ನೋಡುತ್ತಾರೆ ಎಂದು ಲೇವಡಿ ಮಾಡಿದರು.

ಸುಧಾಕರ್​ ಬಿಜೆಪಿಯಲ್ಲಿಯೇ ಇದ್ದು, ಯಾವುದಾದರೂ ಹೊಸ ಕ್ಷೇತ್ರವನ್ನು ನೋಡಿಕೊಳ್ಳಲಿ, ಅವರು ಶ್ರೀಮಂತರಿಗಾಗಿ ಕೆಲಸ ಮಾಡಲಿ. ಸುಧಾಕರ್ ಜೀವನಪರ್ಯಂತ ಮಾಜಿ ಶಾಸಕರಾಗಿಯೇ ಉಳಿಯಬೇಕಾಗಿದೆ ಎಂದು ಟೀಕಿಸಿದರು.

ಆನೆ ಹೋಗುವಾಗ ನಾಯಿ ಬೊಗಳುತ್ತೆ : ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗಡೆ ಸಂವಿಧಾನ ಬದಲಿಸುವುದಾಗಿ ಹೇಳಿದ್ದಾರೆ. ಅವರಷ್ಟೇ ಅಲ್ಲ, ಅವರಪ್ಪ, ಅವರ ತಾತ, ಅವರಿಂದಲೂ ಸಂವಿಧಾನವನ್ನು ಮುಟ್ಟಲು ಸಾಧ್ಯವಿಲ್ಲ. ಆನೆ ಹೋಗುವಾಗ ನಾಯಿ ಬೊಗಳುತ್ತೆ ಎಂದು ಅನಂತಕುಮಾರ್ ಹೆಗಡೆ ಕಥೆ ಹೇಳಿದ್ದಾರೆ. ಅದರಲ್ಲಿ ಆನೆ ಎಂದರೆ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ, ಇನ್ನೊಂದು ಪ್ರಾಣಿ ಇದೆಯಲ್ಲ ಅದು ಅನಂತಕುಮಾರ್ ಹೆಗಡೆಯವರಾ ಎಂದು ತಿರುಗೇಟು ನೀಡಿದರು.