ಬೆಂಗಳೂರು: ಆ ಯುವತಿ ಗುರು ಹಿರಿಯರು ನಿಶ್ಚಯಿಸಿದ ವರನೊಂದಿಗೆ ನೂರಾರು ಕನಸಿನ ಬುತ್ತಿಯೊತ್ತು ಬರೋಬ್ಬರಿ 3 ಕೋಟಿ ವೆಚ್ಚದಲ್ಲಿ ಅದ್ದೂರಿಯಾಗಿ ಮದುವೆಯಾದಳು. ಮೊದಲ ರಾತ್ರಿಗೂ ಕೋಣೆ ಸಿಂಗಾರಗೊಂಡಿತ್ತು. ವೈವಾಹಿಕ ಬದುಕಿನ ಮೊದಲ ರಾತ್ರಿ ಕೋಣೆಗೆ ಎಂಟ್ರಿಕೊಟ್ಟ ಪತಿಮಹಾಶಯ ಬಂದದ್ದು ಮಾತ್ರ ಫುಲ್ ಟೈಟಾಗಿ..!
ಆಗಲೇ ಆ ವಧುಗೆ ಗೊತ್ತಾಗಿದ್ದು ತಾನು ಮದ್ವೆ ಆಗಿರುವ ಭರತ್ ಎಲ್.ರೆಡ್ಡಿ ದುರಭ್ಯಾಸ ಚಟ ಅಂಟಿಸಿಕೊಂಡಿದ್ದಾನೆ ಎಂದು. ಅಷ್ಟೇ ಅಲ್ಲ ಎಸ್ಎಸ್ಎಲ್ಸಿ ಫೇಲಾಗಿದ್ರೂ ಇಂಜಿನಿಯರ್ ಅಂತ ಭರತ್ ಸುಳ್ಳು ಹೇಳಿದ್ದಾನೆ ಎನ್ನಲಾಗಿದೆ. ಕುಡಿತ ಚಟ ಹತ್ತಿಸಿಕೊಂಡಿದ್ದ ಆತ ಮೊದಲ ರಾತ್ರಿಯೇ ಹೆಂಡ್ತಿಗೆ ಚಿತ್ರಹಿಂಸೆ ನೀಡಿದ್ದರ ಮತ್ತು ಮಗನ ಮೊದಲ ರಾತ್ರಿ ನಡೆಯಲೆಂದು ಅತ್ತೆ-ಮಾವ ವಾಮಾಚಾರ ಮಾಡಿಸಿ ಹಿಂಸೆ ನೀಡಿದ್ದರ ಬಗ್ಗೆ ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಭರತ್ ಜತೆ 2020ರ ಅಕ್ಟೋಬರ್ 29ರಂದು ಶ್ರಾವಣಿಯ ಮದುವೆ ಆಗಿತ್ತು. ಮದುವೆ ವೇಳೆ ಭರತ್ಗೆ ವಧುವಿನ ಕುಟುಂಬಸ್ಥರು 1 ಕೋಟಿ ಮೌಲ್ಯದ ಬೆಂಝ್ ಕಾರನ್ನು ನೀಡಿದ್ದರು. 5 ಲಕ್ಷ ರೂ. ಬೆಳೆಬಾಳುವ ಡೈಮಂಡ್ ರಿಂಗ್ ನೀಡಲಾಗಿತ್ತು. ಬೆಂಝ್ ಕಾರು ಸೇರಿ ಐದು ಕೆಜಿ ಚಿನ್ನಾಭರಣ ನೀಡಿ ಸುಮಾರು ಮೂರು ಕೋಟಿ ವೆಚ್ಚದಲ್ಲಿ ಅದ್ದೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು.
ಫಸ್ಟ್ ನೈಟ್ ದಿನವೇ ವಧು ಇದ್ದ ಕೋಣೆಗೆ ಭರತ್ ಕುಡಿದು ಬಂದಿದ್ದ. ಇದನ್ನ ನೋಡಿ ಗಾಬರಿಯಾದ ಪತ್ನಿ ಈ ಬಗ್ಗೆ ಪ್ರಶ್ನಿಸುತ್ತಿದ್ದರೂ ಭರತ್ ಬಲವಂತವಾಗಿ ಆಕೆಯ ಮೈ ಮುಟ್ಟಲು ಯತ್ನಿಸಿದ್ದ. ಇರಿಸುಮುರಿಸುಗೊಂಡ ಪತ್ನಿ, ಭರತ್ನನ್ನು ಹತ್ತಿರ ಬರದಂತೆ ವಿರೋಧಿಸುತ್ತಿದ್ದಾಗ ಕುಪಿತಗೊಂಡ ಆತ ಮುಖ, ಕತ್ತನ್ನು ಪರಚಿ ಹಲ್ಲೆ ಮಾಡಿದ್ದಾನೆ. ಮರುದಿನ ರಾತ್ರಿ ಅತ್ತೆ-ಮಾವ ಇಬ್ಬರೂ ಸೇರಿಕೊಂಡು ವಾಮಾಚಾರ ಮಾಡಿಸಿ ಮೊದಲ ರಾತ್ರಿ ಕಾರ್ಯಕ್ರಮ ನಡೆಸುವಂತೆ ಹಿಂಸೆ ಕೊಟ್ಟಿದ್ದಾಗಿಯೂ ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾರೆ.