Sunita Williams : ಸುಮಾರು 200ಕ್ಕೂ ಅಧಿಕ ದಿನಗಳಿಂದ ಬಾಹ್ಯಾಕಾಶದಲ್ಲೇ ಸಿಲುಕಿರುವ ಇಬ್ಬರು ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಮರಳಿ ಕರೆತರಲು ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸಹಾಯವನ್ನು ಕೇಳಿದ್ದಾರೆ ಎಂದು ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಹೇಳಿದ್ದಾರೆ. ತಮ್ಮ ಕಂಪನಿ ಸ್ಪೇಸ್‌ಎಕ್ಸ್ ಖಂಡಿತ ಸಹಾಯ ಮಾಡಲಿದೆ ಎಂದು ಮಸ್ಕ್ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಎಂಟು ದಿನಗಳ ಕಾರ್ಯಾಚರಣೆಯ ಭಾಗವಾಗಿ ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಬಚ್ ವಿಲ್ಮೋರ್ ಕಳೆದ ವರ್ಷ ಜೂನ್ 6 ರಂದು ಬೋಯಿಂಗ್ ಸ್ಟಾರ್‌ಲೈನರ್ ಕ್ಯಾಪ್ಸುಲ್‌ನಲ್ಲಿ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದರು. ಇಬ್ಬರು ಜೂನ್ 14 ರಂದು ಭೂಮಿಗೆ ಮರಳಬೇಕಾಗಿತ್ತು. ಆದರೆ, ಹೀಲಿಯಂ ಸೋರಿಕೆಯಿಂದಾಗಿ ಸ್ಟಾರ್‌ಲೈನರ್ ಕ್ಯಾಪ್ಸುಲ್ ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿತು. ಹೀಗಾಗಿ ಗಗನಯಾತ್ರಿಗಳನ್ನು ಅಲ್ಲಿಯೇ ಬಿಟ್ಟು ಸ್ಟಾರ್‌ಲೈನರ್ ಕ್ಯಾಪ್ಸುಲ್ ಭೂಮಿಗೆ ಮರಳಿದೆ. ಅಂದಿನಿಂದ, ಇಬ್ಬರು ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣದಲ್ಲಿ ಉಳಿದುಕೊಂಡಿದ್ದು, ಅವರನ್ನು ಮರಳಿ ಕರೆತರಲು ಸಾಕಷ್ಟು ಸವಾಲುಗಳು ಎದುರಾಗಿದ್ದು, ನಾಸಾ ನಿರಂತರವಾಗಿ ಪ್ರಯತ್ನಿಸುತ್ತಿದೆ.
ನೂತನ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್ ಟ್ರಂಪ್, ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಇಬ್ಬರು ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಭೂಮಿಗೆ ಕರೆತರಲು ಹೆಚ್ಚಿನ ಗಮನ ವಹಿಸಿದ್ದಾರೆ. ಹೀಗಾಗಿ ಎಲಾನ್ ಮಸ್ಕ್ ಬಳಿ ನೆರವು ಕೋರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಮಸ್ಕ್, ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ಇಬ್ಬರು ಗಗನಯಾತ್ರಿಗಳನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ವಾಪಸ್ ಕರೆತರಲು ನಮ್ಮ ಸ್ಪೇಷ್ಎಕ್ಸ್ ಬಳಿಕ ಡೊನಾಲ್ಡ್ ಟ್ರಂಪ್ ನೆರವು ಕೇಳಿದ್ದಾರೆ. ನಾವು ಕೂಡ ಆದಷ್ಟು ಬೇಗ ಕರೆತರಲು ಪ್ರಯತ್ನಿಸುತ್ತೇವೆ ಎಂದು ಮಸ್ಕ್ ಭರವಸೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಮಸ್ಕ್ ಅವರು ಈ ಹಿಂದಿನ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರನ್ನು ಟೀಕಿಸಿದ್ದಾರೆ. ಇಬ್ಬರು ಗಗನಯಾತ್ರಿಗಳು ಇಷ್ಟು ಸಮಯದವರೆಗೆ ಬಾಹ್ಯಾಕಾಶದಲ್ಲಿ ಸಿಲುಕಲು ಬೈಡೆನ್ ಆಡಳಿತದ ನಿರ್ಲಕ್ಷ್ಯ ಕಾರಣ ಎಂದು ಮಸ್ಕ್ ಟೀಕಿಸಿದ್ದಾರೆ. ಅಂದರೆ, ಸುನೀತಾ ವಿಲಿಯಮ್ಸ್ ಮತ್ತು ಬಚ್ ವಿಲ್ಮೋರ್ ಅವರನ್ನು ವಾಪಸ್ ಕರೆತರುವಲ್ಲಿ ನಾಸಾ ತನ್ನ ಕಂಪನಿಯ ಸಹಾಯ ಕೇಳಿದೆ ಎಂದು ಮಸ್ಕ್ ಅವರ ಸ್ಪೇಸ್‌ಎಕ್ಸ್ ಕಳೆದ ವರ್ಷ ಆಗಸ್ಟ್‌ನಲ್ಲೇ ಘೋಷಣೆ ಮಾಡಿತು. ಇದಕ್ಕಾಗಿ, ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಮಿಷನ್ನಲ್ಲಿ ಎರಡು ಖಾಲಿ ಆಸನಗಳೊಂದಿಗೆ ಬಾಹ್ಯಾಕಾಶಕ್ಕೆ ಕಳುಹಿಸಲಾಗಿದೆ.
ಸ್ಪೇಷ್ ಎಕ್ಸ್ ನೌಕೆಯ ಮೂಲಕ ಬಾಹ್ಯಾಕಾಶಕ್ಕೆ ಹೋಗಿರುವ ಇಬ್ಬರು ಗಗನಯಾತ್ರಿಗಳ ಜೊತೆಗೆ, ಸುನೀತಾ ವಿಲಿಯಮ್ಸ್ ಮತ್ತು ಬಚ್ ವಿಲ್ಮೋರ್ ಅವರನ್ನು ಸಹ ಭೂಮಿಗೆ ಮರಳಿ ಕರೆತರುವ ನಿರೀಕ್ಷೆಯಿದೆ. ಆದಾಗ್ಯೂ, ಕಾರಣಾಂತರಗಳಿಂದ ಡ್ರ್ಯಾಗನ್ ಆಗಮನವನ್ನು ಸಹ ಮುಂದೂಡಲಾಗುತ್ತಿದೆ. ಸುನೀತಾ ಮತ್ತು ವಿಲ್ಮೋರ್ ಶೀಘ್ರದಲ್ಲೇ ಭೂಮಿಗೆ ಮರಳುವ ಸಾಧ್ಯತೆಯಿದೆ ಎಂದೂ ಹೇಳಲಾಗುತ್ತಿದೆ. ಅದಕ್ಕಾಗಿ ಅಸಂಖ್ಯಾತ ಜನರು ಪ್ರಾರ್ಥಿಸುತ್ತಿದ್ದಾರೆ. ಕರೆತರುವುದು ವಿಳಂಬವಾದಷ್ಟು ಇಬ್ಬರು ಗಗನಯಾತ್ರಿಗಳು ಸಾಕಷ್ಟು ಅಫಾಯ ಎದುರಿಸಬೇಕಾಗುತ್ತದೆ. (ಏಜೆನ್ಸೀಸ್)