ಚಿನ್ನ ಕಳ್ಳಸಾಗಣೆ ಆರೋಪದಲ್ಲಿ ಜಪ್ತಿ ಮಾಡಲಾದ ವಾಹನ. 
ಜಿಲ್ಲೆ

ಸ್ಮಗ್ಲಿಂಗ್ ಚಿನ್ನ ಪೊಲೀಸರಿಂದಲೇ ಕಳ್ಳತನ?; ಸೀಜ್ ಮಾಡಿದ್ದ ಕಾರಲ್ಲಿತ್ತು ಎರಡೂವರೆ ಕೋಟಿ ರೂ. ಮೌಲ್ಯದ ಬಂಗಾರ..

| ರವಿ ಗೋಸಾವಿ ಬೆಳಗಾವಿ

ಜಪ್ತಿ ಮಾಡಲಾದ ಕಾರಿನಲ್ಲಿದ್ದ ಸುಮಾರು ಎರಡು ಕೋಟಿ ರೂ. ಮೌಲ್ಯದ ಚಿನ್ನವನ್ನು ಪೊಲೀಸರೇ ಕಳವು ಮಾಡಿದ ಶಂಕೆ ವ್ಯಕ್ತವಾಗಿದೆ. ದಿಢೀರ್ ಬೆಳವಣಿಗೆಯಲ್ಲಿ ಉತ್ತರ ವಲಯದ ಐಜಿಪಿ ಸೇರಿ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಎತ್ತಂಗಡಿ ಮಾಡಿರುವುದು ಕುತೂಹಲ ಮೂಡಿಸಿದೆ.

ಚಿನ್ನ ಕಳ್ಳಸಾಗಣೆ ಮಾಹಿತಿ ಹಿನ್ನೆಲೆಯಲ್ಲಿ ಜ. 9ರಂದು ಎರ್ಟಿಗಾ ಕಾರು ಜಪ್ತಿ ಮಾಡಿ, ಪರಿಶೀಲಿಸಿದಾಗ ಚಾಕು ಮತ್ತು ಡಿಮ್ಮಿಂಗ್ ಬ್ಯಾಟರಿ ದೊರೆತಿತ್ತು. ನಿಯಮಬಾಹಿರವಾಗಿ ವಾಹನ ಮಾಡಿಫೈ ಮಾಡಿರುವ ಕಾರಣಕ್ಕೆ ಪಿಎಸ್​ಐ ರಮೇಶ ಪಾಟೀಲ ಅವರು ಕೆಪಿ ಆಕ್ಟ್ ಅಡಿ ವಾಹನ ಮಾಲೀಕ ಲಕ್ಷ್ಮಣ ಪೂಜಾರಿ, ನವನೀತ ಜಾಧವ್, ಕರುಣಾಕರ ಶೆಟ್ಟಿ ಎಂಬುವರ ವಿರುದ್ಧ ಜ.10ರಂದು ಪ್ರಕರಣ ದಾಖಲಿಸಿದ್ದರು. ಜಪ್ತಿ ಮಾಡಿದ ಕಾರಿನ ಏರ್ ಬ್ಯಾಗ್​ನಲ್ಲಿ 4 ಕೆಜಿ 900 ಗ್ರಾಂ ಚಿನ್ನ ಬಚ್ಚಿಡಲಾಗಿತ್ತು ಎಂದು ಹೇಳಲಾಗುತ್ತಿದೆ.

ಈ ವಿಚಾರ ಕಿರಣ ವೀರನಗೌಡ ಎಂಬಾತನಿಂದ ಉನ್ನತ ಪೊಲೀಸ್ ಅಧಿಕಾರಿಯೊಬ್ಬರಿಗೆ ಮಾಹಿತಿ ಸಿಕ್ಕಿತ್ತು. ಅಧಿಕಾರಿಯೇ ಮಾಲೀಕ ತಿಲಕ್ ಪೂಜಾರಿಗೆ ಬಳಿ ವಾಹನ ಬಿಡುಗಡೆಗೆ 60 ಲಕ್ಷ ರೂ.ಗೆ ಬೇಡಿಕೆ ಇಟ್ಟು, ಕೊನೆಗೆ 25 ಲಕ್ಷ ರೂ.ಗೆ ಡೀಲ್ ಕುದುರಿಸಿದ್ದರು. ಹೀಗಾಗಿಯೇ ವಾಹನ ಬಿಡುಗಡೆ ಮಾಡುವಂತೆ ಯಮಕನಮರಡಿ ಪೊಲೀಸ್ ಠಾಣೆ ಸಿಬ್ಬಂದಿ ಮೇಲೆ ಒತ್ತಡ ಹೇರಿದ್ದರು. ಆದರೆ, ಎಫ್​ಐಆರ್ ದಾಖಲಾಗಿದ್ದರಿಂದ ಕಾರು ಬಿಡುಗಡೆ ಸಾಧ್ಯವಾಗಿರಲಿಲ್ಲ.

ಏಪ್ರಿಲ್ 16ರಂದು ಬಿಡುಗಡೆ ಮಾಡುವಂತೆ ನ್ಯಾಯಾಲಯ ಆದೇಶಿಸಿತ್ತು. ಆದರೆ, ಠಾಣೆಯಿಂದ ಹೊರಗೆ ವಾಹನ ತಂದು ಏರ್​ಬ್ಯಾಗ್​ನಲ್ಲಿ ಹುಡುಕಾಡಿದಾಗ ಚಿನ್ನ ದೊರೆತಿರಲಿಲ್ಲ. ಹೀಗಾಗಿ ವಾಹನ ಸ್ಟಾರ್ಟ್ ಆಗುತ್ತಿಲ್ಲ ಎಂಬ ನೆಪವೊಡ್ಡಿ ಅದೇ ಠಾಣೆಯಲ್ಲಿ ವಾಹನ ಬಿಟ್ಟು ಹೊರಟು ಹೋಗಿದ್ದರು. ಕೋರ್ಟ್​ನಿಂದ ಬಿಡುಗಡೆ ಆದೇಶಕ್ಕೂ ಮುನ್ನವೇ ಉನ್ನತ ಪೊಲೀಸ್ ಅಧಿಕಾರಿಗಳ ನೆರವು ಪಡೆದು ಠಾಣಾ ಆವರಣದಿಂದ ವಾಹನವನ್ನೇ ಕಳವು ಮಾಡುವ ಪ್ರಯತ್ನವೂ ನಡೆದಿತ್ತು ಎಂದು ಹೇಳಲಾಗುತ್ತಿದೆ.

ಐಜಿಪಿ ಸೇರಿ ನಾಲ್ವರ ವರ್ಗಾವಣೆ: ಚಿನ್ನ ನಾಪತ್ತೆ ಪ್ರಕರಣದಲ್ಲಿ ಕೈವಾಡದ ಆರೋಪ ವೆುೕಲೆ ಪಿಎಸ್​ಐ ರಮೇಶ ಪಾಟೀಲ, ಸಿಪಿಐ ಗುರುರಾಜ ಶೆಟ್ಟಿ, ಡಿವೈಎಸ್ಪಿ ಜಾವೀದ್ ಇನಾಂದಾರ್ ಅವರನ್ನು ಗುರುವಾರವೇ ವರ್ಗಾವಣೆ ಮಾಡಲಾಗಿದೆ. ಉತ್ತರ ವಲಯದ ಐಜಿಪಿ ರಾಘವೇಂದ್ರ ಸುಹಾಸ್ ಅವರನ್ನು ಶುಕ್ರವಾರ ವರ್ಗಾವಣೆ ಮಾಡಲಾಗಿದೆ.

ಪೊಲೀಸರ ವಿರುದ್ಧ ಐಜಿಪಿಗೆ ದೂರು: ಕಾರಿನಲ್ಲಿದ್ದ ಚಿನ್ನ ಮಾಯವಾದ ಹಿನ್ನೆಲೆಯಲ್ಲಿ ಯಮಕನಮರಡಿ ಠಾಣೆ ಸಿಬ್ಬಂದಿಯೇ ಚಿನ್ನ ಎಗರಿಸಿದ್ದಾರೆ ಎಂದು ಐಜಿಪಿ ಕಚೇರಿಯಲ್ಲಿ ದೂರು ದಾಖಲಾಗಿತ್ತು. ನಂತರ ತನಿಖೆ ನಡೆಸುವಂತೆ ಎಸ್ಪಿ ಲಕ್ಷ್ಮಣ ನಿಂಬರಗಿ ಅವರಿಗೆ ಐಜಿಪಿ ಆದೇಶಿಸಿದ್ದರು. ಚಿನ್ನ ಸ್ಮಗ್ಲಿಂಗ್ ಆರೋಪ ಹೊತ್ತಿರುವವರ ಜತೆ ಪೊಲೀಸ್ ಅಧಿಕಾರಿಗಳು ಮಾತನಾಡಿರುವ ಕಾಲ್ ರೆಕಾರ್ಡ್ ತನಿಖಾಧಿಕಾರಿಗಳಿಗೆ ಸಿಕ್ಕಿದೆ ಎನ್ನಲಾಗುತ್ತಿದೆ.

ಪ್ರಕರಣದ ತನಿಖೆ ಹೊಣೆ ಸಿಐಡಿಗೆ: ಚಿನ್ನ ನಾಪತ್ತೆ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದ ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬರಗಿ ವರದಿ ಮೇರೆಗೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಬೆಳಗಾವಿಗೆ ಆಗಮಿಸಿದ್ದ ಬೆಂಗಳೂರಿನ ಸಿಐಡಿ ಎಸ್ಪಿ ರಾಘವೇಂದ್ರ ಹೆಗಡೆ ನೇತೃತ್ವದ ತಂಡ ವಿಚಾರಣೆ ನಡೆಸಿ, ಮಹತ್ವದ ಮಾಹಿತಿ ಪಡೆದುಕೊಂಡಿದೆ. ಯಮಕನಮರಡಿ ಠಾಣೆ ಪಿಎಸ್​ಐ ರಮೇಶ ಪಾಟೀಲ ಸೇರಿ ಎಲ್ಲ ಸಿಬ್ಬಂದಿಯಿಂದ ಮಾಹಿತಿ ಕಲೆ ಹಾಕಿದೆ. ಶುಕ್ರವಾರ ಈ ತಂಡ ಬೆಂಗಳೂರಿಗೆ ವಾಪಸ್ಸಾಗಿದ್ದು, ಶೀಘ್ರದಲ್ಲೇ ಡಿಜಿಪಿಗೆ ವರದಿ ಒಪ್ಪಿಸಲಿದೆ.