ಬೆಂಗಳೂರು: ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಪಟ್ಟಿದ್ದ ಮಾಜಿ ಮೇಯರ್, ಕಾಂಗ್ರೆಸ್ ಮುಖಂಡ ಸಂಪತ್ರಾಜ್ ಅವರನ್ನು ಜೈಲಿಗೆ ಶಿಫ್ಟ್ ಮಾಡಲಾಗಿದೆ.
ಡಿಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಕಾವಲ್ಭೈರಸಂದ್ರ ಗಲಭೆಯಲ್ಲಿ ಪುಲಿಕೇಶಿನಗರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಹಚ್ಚಲು ಕುಮ್ಮಕ್ಕು ನೀಡಿದ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಸಂಪತ್ರಾಜ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ 67ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಸಂಪತ್ರಾಜ್ರನ್ನು ಸಿಸಿಬಿ ಪೊಲೀಸರು ನ.15ರಂದು ಬಂಧಿಸಿದ್ದರು. ಮೂರು ದಿನ ವಶಕ್ಕೆ ಪಡೆದು ವಿಚಾರಣೆ ನಡೆಸಿ ಶುಕ್ರವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶೆ ಕಾತ್ಯಾಯಿನಿ, 24ರವರೆಗೆ ಸಂಪತ್ರಾಜ್ರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ಅಖಂಡ ಶ್ರೀನಿವಾಸ ಮೂರ್ತಿ ಸೋದರಳಿಯ ನವೀನ್, ಫೇಸ್ಬುಕ್ನಲ್ಲಿ ಅವಹೇಳನಕಾರಿ ಪೋಸ್ಟ್ ಪ್ರಕಟಿಸಿದ ವಿಚಾರಕ್ಕೆ ಉದ್ರಿಕ್ತ ಗುಂಪೊಂದು ಆ.11ರ ರಾತ್ರಿ ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿಯಲ್ಲಿ ಗಲಭೆ ಎಬ್ಬಿಸಿತ್ತು. ಇದೇ ವೇಳೆ ಅಖಂಡ ಮನೆಗೆ ಬೆಂಕಿ ಹಚ್ಚಿಸಿರುವ ಆರೋಪ ಸಂಪತ್ರಾಜ್ ವಿರುದ್ಧ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದರು. ತನಗೆ ಅನಾರೋಗ್ಯ ಎಂದು ಆಸ್ಪತ್ರೆ ಸೇರಿದ್ದ ಸಂಪತ್ರಾಜ್, ಬಳಿಕ ನಾಪತ್ತೆಯಾಗಿದ್ದರು.
ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪತ್ರಾಜ್ ವಿಚಾರಣೆ ನಡೆಸಲು ರಾಷ್ಟ್ರೀಯ ತನಿಖಾ ದಳಕ್ಕೆ(ಎನ್ಐಎ) ಕೋರ್ಟ್ ಅನುಮತಿ ನೀಡಿದೆ. ನ. 23 ಮತ್ತು 24ರಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿಯೇ ವಿಚಾರಣೆ ನಡೆಸುವಂತೆ ಎನ್ಐಎ ಅಧಿಕಾರಿಗಳಿಗೆ ಸೂಚಿಸಿದೆ. ಅಲ್ಲದೆ, ಸಂಪತ್ರಾಜ್ ಸಲ್ಲಿಸಿದ್ದ ಜಾಮೀನು ಕೋರಿ ಅರ್ಜಿ ವಿಚಾರಣೆಯನ್ನು 24ಕ್ಕೆ ಮುಂದೂಡಿದೆ. ಇದಕ್ಕೆ ಆಕ್ಷೇಪಣೆ ಸಲ್ಲಿಸುವಂತೆ ಸಿಸಿಬಿಗೆ ಸೂಚಿಸಿದೆ.