ಜಿಲ್ಲೆ

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣ ಎಸ್‌ಡಿಪಿಐ/ಪಿಎಫ್​ಐನ 17 ಮಂದಿ ಎನ್‌ಐಎ ಬಲೆಗೆ

ಬೆಂಗಳೂರು: ಕಾಡುಗೊಂಡನಹಳ್ಳಿ-ದೇವರಜೀವನಹಳ್ಳಿ ಗಲಭೆ ಪ್ರಕರಣದ ಸಂಬಂಧ ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ) ಎಸ್‌ಡಿಪಿಐ/ ಪಿಎಫ್​ಐನ 17 ಗಲಭೆಕೋರರನ್ನು ಸೋಮವಾರ ಬಂಧಿಸಿದೆ. ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಸಹೋದರ ಸಂಬಂಧಿ ನವೀನ್, ಫೇಸ್‌ಬುಕ್‌ನಲ್ಲಿ ವಿವಾದಾತ್ಮಕ ಹೇಳಿಕೆ ಅಪ್‌ಲೋಡ್ ಮಾಡಿದ್ದ. ಈ ಹಿನ್ನೆಲೆಯಲ್ಲಿ ಆಗಸ್ಟ್ 11ರಂದು ಡಿಜೆ ಹಳ್ಳಿ, ಕೆಜಿ ಹಳ್ಳಿ ಪೊಲೀಸ್ ಠಾಣೆ ಹಾಗೂ ಶಾಸಕರ ಮನೆಗೆ ಬೆಂಕಿ ಹಚ್ಚಿ ಗಲಭೆ ನಡೆಸಿದ್ದರು. ಪ್ರಕರಣದ ತನಿಖೆ ಕೈಗೊಂಡು ಕೆಜಿ ಹಳ್ಳಿ ಠಾಣೆಗೆ ಬೆಂಕಿ ಹಚ್ಚಿದ ಪ್ರಕರಣದ ಸಂಬಂಧ ಎಸ್‌ಡಿಪಿಐ ಬೆಂಗಳೂರು ನಗರ ಅಧ್ಯಕ್ಷ ಶರೀಷ್, ಕೆಜಿ ಹಳ್ಳಿ ವಾರ್ಡ್ ಅಧ್ಯಕ್ಷ ಇಮ್ರಾನ್ ಅಹ್ಮದ್, ಕಾರ್ಯಕರ್ತರಾದ ರುಬಾ ವಕಾಸ್, ಶಬ್ಬಿರ್ ಖಾನ್, ಶೈಕ್ ಅಜ್ಮಲ್ ಸೇರಿದಂತೆ 17 ಮಂದಿಯನ್ನು ಬಂಧಿಸಿರುವುದಾಗಿ ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.

ಆಗಸ್ಟ್ 11ರ ಸಂಜೆ ಥಣಿಸಂದ್ರ ಮತ್ತು ಕೆಜಿ ಹಳ್ಳಿ ವಾರ್ಡ್‌ಗಳಲ್ಲಿ ಬಂಧಿತ ಆರೋಪಿಗಳು ಸಭೆ ನಡೆಸಿ ಗಲಭೆಗೆ ಸಂಚು ರೂಪಿಸಿದ್ದರು.

ಫೇಸ್‌ಬುಕ್, ಇನ್‌ಸ್ಟ್ರಾಗ್ರಾಮ್, ವಾಟ್ಸ್‌ಆ್ಯಪ್‌ಗಳಲ್ಲಿ ಪ್ರಚೋದನಾತ್ಮಕ ಹೇಳಿಕೆಗಳನ್ನು ವೈರಲ್ ಮಾಡಿ ಕೆ.ಜಿ.ಹಳ್ಳಿ ಪೊಲೀಸ್ ಠಾಣೆ ಮುಂದೆ ಗುಂಪು ಸೇರಿಸಿದ್ದರು. ಇದರ ಮುಂದಾಳತ್ವವನ್ನು ಬಂಧಿತ ಸದ್ದಾಂ, ಸೈಯದ್ ಸೊಹೆಲ್, ಕಲೀ ಮುಲ್ಲಾ ಅಲಿಯಾಸ್ ಶರೂಕ್ ಖಾನ್ ವಹಿಸಿಕೊಂಡಿದ್ದರು.

ಕೆ. ಜಿ. ಹಳ್ಳಿ ಠಾಣೆ ಮುಂದೆ ಗುಂಪು ಸೇರಿಸಿ ಪೊಲೀಸ್ ಸಿಬ್ಬಂದಿ ಮತ್ತು ನಾಗರಿಕರ ಮೇಲೆ ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ಎಸೆದು ಗಲಭೆ ನಡೆಸಿದ್ದರು. ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರ ವಾಹನಗಳಿಗೆ ಬೆಂಕಿ ಹಚ್ಚಿ ಹಾನಿ ಉಂಟು ಮಾಡಿದ್ದರು. ಪೊಲೀಸ್ ಠಾಣೆಗೂ ಬೆಂಕಿ ಹಚ್ಚಿದ್ದರು. ಎಸ್‌ಡಿಪಿಐನ ನಾಗವಾರ ವಾರ್ಡ್ ಅಧ್ಯಕ್ಷ ಅಬ್ಬಾಸ್ ತನ್ನ ಸಹಚರರಾದ ಆಜಿಲ್ ಪಾಷಾ, ಇಮ್ರಾನ್ ಖಾನ್ ಮತ್ತು ಅಕ್ಬರ್ ಖಾನ್ ಜತೆ ಗ್ಯಾಂಗ್ ಕಟ್ಟಿಕೊಂಡು ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.

187 ಗಲಭೆಕೋರರ ಸೆರೆ: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ 187 ಆರೋಪಿಗಳನ್ನು ಬಂಧಿಸಿದ್ದು, ಕಾರ್ಯಾಚರಣೆ ಮುಂದುವರಿದಿದೆ. ತನಿಖೆ ವೇಳೆ ಸಿಗುವ ಸಾಕ್ಷ್ಯಾಧಾರಗಳ ಮೇಲೆ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಬಂಧಿಸುವುದಾಗಿ ಎನ್‌ಐಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.