ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಬೆಳಕಿನ ಹಬ್ಬವು ವಿಜಯ, ಸಾಮರಸ್ಯವನ್ನು ಪ್ರತಿಪಾದಿಸುವ ಹಬ್ಬವಾಗಿದೆ. ಧಾರ್ಮಿಕ ಮತ್ತು ಪೌರಾಣಿಕ ಹಿನ್ನೆಲೆ ಹೊಂದಿರುವ ದೀಪಾವಳಿ ಹಬ್ಬ ಅಂಧಕಾರದಿಂದ ಎಚ್ಚೆತ್ತುಕೊಂಡು ಬೆಳಕಿನೆಡೆಗೆ ಸಾಗುವುದನ್ನು ಸೂಚಿಸುತ್ತದೆ. ಈ ಬೆಳಕು ಸರ್ವರ ಬದುಕನ್ನು ಒಳಿತಿನೆಡೆಗೆ ಬೆಳಗುವ ದಾರಿದೀಪವಾಗಲಿ ಎಂದು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರಣ್ ವರ್ಮ ಹೇಳಿದರು.
ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಉಜಿರೆಯ ಎಸ್‌ಡಿಎಂ ಐಟಿ ಕಾಲೇಜು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ದೀಪಾವಳಿ ಸಂಭ್ರಮಾಚರಣೆಯಲ್ಲಿ ಮಾತನಾಡಿದರು.
ರೋಟರಿ ಸಂಸ್ಥೆಯ ಆನ್ಸ್ ಸದಸ್ಯರಿಂದ ಲಕ್ಷ್ಮೀ ಪೂಜೆ ಕಾರ್ಯಕ್ರಮ ನಡೆಯಿತು. ಬಳಿಕ ತುಳುನಾಡ ಶೈಲಿಯ ಹಬ್ಬದ ಆಚರಣೆಗಳನ್ನು ಯುವ ತಲೆಮಾರಿಗೆ ತಿಳಿಸುವ ಸಲುವಾಗಿ ಪ್ರತಿಯೊಂದು ಪೂಜೆಯ ವಿಧಿವಿಧಾನಗಳ ಮಾಹಿತಿ ವಿವರಿಸಿ ಎಲ್ಲರ ಸಹಭಾಗಿತ್ವದಲ್ಲಿ ಗೋಪೂಜೆ, ಬಲೀಂದ್ರ ಪೂಜೆ ನೆರವೇರಿತು.
ಬಲೀಂದ್ರನ ಕೂಗುವಿಕೆ ಕಾರ್ಯಕ್ರಮದ ಮೆರುಗನ್ನು ಇನ್ನಷ್ಟು ಹೆಚ್ಚಿಸಿತು. ರೋಟರಿ ಸದಸ್ಯರು ತಮ್ಮ ವಾಹನಗಳಿಗೆ ಕುಟುಂಬ ಸಮೇತ ಪೂಜೆ ಸಲ್ಲಿಸಿದರು. ದೀಪಗಳ ಜತೆಯಲ್ಲಿ ಪಟಾಕಿ ಹಚ್ಚುವ ಮೂಲಕ ಬೆಳಕಿನ ಹಬ್ಬದ ಸಂಭ್ರಮಾಚರಿಸಲಾಯಿತು.
ರೋಟರಿ ಕ್ಲಬ್ ಅಧ್ಯಕ್ಷ ಪೂರಣ್ ವರ್ಮ, ಕಾರ್ಯದರ್ಶಿ ಸಂದೇಶ್ ಕುಮಾರ್ ರಾವ್, ರೋಟರಿ ಕ್ಲಬ್ ಸದಸ್ಯರಾದ ಅನಂತ ಭಟ್,. ಶ್ರೀಧರ್ ಕೆ.ವಿ., ಬಿ.ಕೆ.ಧನಂಜಯ್ ರಾವ್, ವಿದ್ಯಾ ಕುಮಾರ್, ಶರತ್ ಕೃಷ್ಣ ಪಡುವೆಟ್ನಾಯ, ಆನ್ಸ್ ಕ್ಲಬ್ ಅಧ್ಯಕ್ಷೆ ಗಾಯತ್ರಿ ಶ್ರೀಧರ್, ಕಾರ್ಯದರ್ಶಿ ವಿನಯ ಕಿಶೋರ್ ಉಪಸ್ಥಿತರಿದ್ದರು. ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ಕುಮಾರ್ ರಾವ್ ವಂದಿಸಿದರು.
ಕೃಷಿ ಪರಿಕರಗಳಿಗೆ ವಿಶೇಷ ಪೂಜೆ
ಕೃಷಿ ಪರಿಕರಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕೃಷಿಯಿಂದ ಯುವ ಜನತೆ ತಂತ್ರಜ್ಞಾನಗಳತ್ತ ಸಾಗುತ್ತಿರುವ ವರ್ತಮಾನದಲ್ಲಿ ಕೃಷಿ ಪರಿಕರಗಳ ಮಹತ್ವ, ಉಪಯೋಗಗಳ ಕುರಿತಾಗಿ ತಿಳಿಸಲಾಯಿತು.