ಬಂಟ್ವಾಳ: ತಾಲೂಕಿನ 18 ಗ್ರಾಮಗಳು ಕ್ಷಯ ಮುಕ್ತವಾಗಿದ್ದು, 30 ಗ್ರಾಮಗಳನ್ನು ಕ್ಷಯ ಮುಕ್ತಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್ ರೈ ಹೇಳಿದರು.
ಕೇಂದ್ರ ಸರ್ಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಸೇವಾಂಜಲಿ ಪ್ರತಿಷ್ಠಾನ ಸಹಕಾರದೊಂದಿಗೆ ಫರಂಗಿಪೇಟೆಯಲ್ಲಿ ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್ ವಿತರಿಸಿ ಮಾತನಾಡಿದರು.
ಪುದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚೈತನ್ಯ ಕೆ.ಎಸ್. ಮಾತನಾಡಿ, ಪೌಷ್ಟಿಕಾಹಾರ ಸೇವಿಸಿದಾಗ ರೋಗಿಯ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಳವಾಗಿ ರೋಗ ಗುಣಮುಖವಾಗಲು ಸಾಧ್ಯವಿದೆ ಎಂದರು.
ಆರೋಗ್ಯ ಇಲಾಖೆಯ ಡೇವಿಡ್ ಕ್ಷಯ ರೋಗದ ಬಗ್ಗೆ ಮಾಹಿತಿ ನೀಡಿದರು. ಕೆ.ಎಸ್.ಹೆಗ್ಡೆ ಆಸ್ಪತ್ರೆ ಸಂಶೋಧನಾ ವಿದ್ಯಾರ್ಥಿ ಡಾ.ಮಹಮ್ಮದ್ ಬಿಲಾಲ್ ಪಾಷ, ಸೇವಾಂಜಲಿಯ ಮಾಧವ ಪೂಜಾರಿ ದೋಟ, ಪ್ರಸಾದ್ ಕೇಸನಮೊಗರು, ನಾರಾಯಣ ಬಡ್ಡೂರು, ಪದ್ಮನಾಭ ಕಿದೆಬೆಟ್ಟು, ಕೇಶವ ದೋಟ, ಪ್ರಶಾಂತ್ ತುಂಬೆ, ವಿಕ್ರಂ ಬರ್ಕೆ, ಮಧುರಾಜ್ ಶೆಟ್ಟಿ ಸುಜೀರು ಉಪಸ್ಥಿತರಿದ್ದರು. ಸೇವಾಂಜಲಿ ಪ್ರತಿಷ್ಠಾನ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಸ್ವಾಗತಿಸಿದರು. ಟ್ರಸ್ಟಿ ದೇವದಾಸ್ ಶೆಟ್ಟಿ ಕೊಡ್ಮಾನ್ ಕಾರ್ಯಕ್ರಮ ನಿರೂಪಿಸಿದರು.