ಜಿಲ್ಲೆ

ಸರ್ಕಾರಿ ಸವಲತ್ತುಗಳ ಸದುಪಯೋಗ : ಸಾರ್ವಜನಿಕರಿಗೆ ಸಚಿವ ಒ.ಆರ್.ಕೇಳು ಕಿವಿಮಾತು : ಅಭಿವೃದ್ಧಿ ಯೋಜನೆ ಲೋಕಾರ್ಪಣೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಸಾರ್ವಜನಿಕರು ಸರ್ಕಾರದಿಂದ ಲಭಿಸಬೇಕಾದ ತಮ್ಮ ಹಕ್ಕುಗಳಿಗಾಗಿ ಕಾದು ನಿಲ್ಲದೆ, ಕೇಳಿ ಪಡೆದುಕೊಳ್ಳುವಂತಾಗಬೇಕು ಎಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಅಭಿವೃದ್ಧಿ ಖಾತೆ ಸಚಿವ ಒ.ಆರ್.ಕೇಳು ತಿಳಿಸಿದ್ದಾರೆ.

ಕಾಂಞಂಗಾಡ್ ಬ್ಲಾಕ್ ಪಂಚಾಯಿತಿ ಮೇಲ್ಬರಂಬದ ಪರಿಶಿಷ್ಟ ಜಾತಿ ‘ಉನ್ನತಿ’ಯಲ್ಲಿ ಸರ್ಕಾರದ ಅಂಬೇಡ್ಕರ್ ಗ್ರಾಮಾಭಿವೃದ್ಧಿ ಯೋಜನೆಯನ್ವಯ ಲಭಿಸಿದ 1 ಕೋಟಿ ರೂ. ವೆಚ್ಚದ ಅಭಿವೃದ್ಧಿ ಯೋಜನೆ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಶಾಸಕ ಸಿಎ.ಎಚ್.ಕುಞಂಬು ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸಕ್ತ ಅಂಬೇಡ್ಕರ್ ಗ್ರಾಮಾಭಿವೃದ್ಧಿ ಯೋಜನೆ ಅಂಗವಾಗಿ ಆಯ್ಕೆ ಮಾಡಲಾದ 60 ಬಹು ಮಹಡಿ ಕಟ್ಟಡಗಳಲ್ಲಿ 13 ಕಟ್ಟಡಗಳನ್ನು ನವೀಕರಿಸಲಾಗಿದ್ದು, ಉಳಿದವುಗಳ ಕೆಲಸ ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದು ಎಂದರು.

ಜಿಲ್ಲಾ ನಿರ್ಮಿತಿ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಇ.ಪಿ.ರಾಜಮೋಹನ್ ವರದಿ ಮಂಡಿಸಿದರು. ಕಾಞಂಗಾಡು ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಕೆ.ಮಣಿಕಂಠನ್, ಉದುಮ ಗ್ರಾಪಂ ಅಧ್ಯಕ್ಷೆ ಪಿ.ಲಕ್ಷ್ಮೀ, ಉದುಮ ಗ್ರಾಪಂ ಉಪಾಧ್ಯಕ್ಷ ಕೆ.ವಿ.ಬಾಲಕೃಷ್ಣನ್, ಕಾಞಂಗಾಡ್ ಬ್ಲಾಕ್ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ವಿಜಯನ್, ಉದುಮ ಗ್ರಾಪಂ ಸದಸ್ಯರಾದ ಸುನೀಲ್ ಕುಮಾರ್ ಮೂಲಾಯಿಲ್, ಎನ್.ಚಂದ್ರನ್, ಪರಿಶಿಷ್ಟ ಜಾತಿ ಜಿಲ್ಲಾ ಸಲಹಾ ಸಮಿತಿ ಸದಸ್ಯ ಚಂದ್ರನ್ ಕೋಕಲ್ ಮತ್ತಿತರರಿದ್ದರು. ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಅಧಿಕಾರಿ ಕೆ.ವಿ.ರವಿರಾಜ್ ಸ್ವಾಗತಿಸಿದರು. ಕಾಂಞಂಗಾಡ್ ಬ್ಲಾಕ್ ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆ ಅಧಿಕಾರಿ ಪಿ.ಬಿ.ಬಶೀರ್ ವಂದಿಸಿದರು.