ಜಿಲ್ಲೆ

ಮೆಜೆಸ್ಟಿಕ್​ನಿಂದ ವಿಮಾನನಿಲ್ದಾಣಕ್ಕೆ ಕೇವಲ 10 ರೂ.ನಲ್ಲಿ ಪ್ರಯಾಣಿಸಿ!

ಬೆಂಗಳೂರು: ವಿಮಾನ ಪ್ರಯಾಣಿಕರಿಗೊಂದು ಗುಡ್​​ ನ್ಯೂಸ್​. ಮೆಜೆಸ್ಟಿಕ್​ನ ಕೆಎಸ್​ಆರ್​(ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ) ರೈಲು ನಿಲ್ದಾಣದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಲು ನೂರಾರು ರೂಪಾಯಿ ವ್ಯಯಿಸಬೇಕಿಲ್ಲ, 10 ರೂಪಾಯಿ ಇದ್ದರೆ ಸಾಕು!

ಹೌದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೈಲು ಪ್ರಯಾಣದ ಕನಸು ಸಾಕಾರಗೊಂಡಿದ್ದು, ಇಂದಿನಿಂದ(ಸೋಮವಾರ) ಕೆಎಸ್​ಆರ್​ ರೈಲು ನಿಲ್ದಾಣದಿಂದ ದೇವನಹಳ್ಳಿಗೆ ಡೆಮು ರೈಲು ಸಂಚಾರ ಆರಂಭಗೊಂಡಿದೆ. ಇದನ್ನೂ ಓದಿರಿ ಕಾಲು ಕಳೆದುಕೊಂಡ ಅಭಿಮಾನಿಯ ಬಾಳಿಗೆ ಬೆಳಕಾದ ಕಿಚ್ಚ!

ಸದ್ಯ ಪ್ರತಿದಿನ 5 ರೈಲುಗಳು ಸಂಚರಿಸಲಿವೆ. ವಿಮಾನಗಳು ಹೆಚ್ಚು ಸಂಚರಿಸುವ ವೇಳೆ ಉಪನಗರ ರೈಲುಗಳು ಕಾರ್ಯಾಚರಣೆ ಮಾಡಲಿವೆ. ಕೆಎಸ್​ಆರ್​ ರೈಲು ನಿಲ್ದಾಣದಿಂದ 10 ರೂಪಾಯಿ, ಕಂಟೋನ್ಮೆಂಟ್​ ರೈಲು ನಿಲ್ದಾಣದಿಂದ 15 ರೂಪಾಯಿ ದರದಲ್ಲಿ ವಿಮಾನ ನಿಲ್ದಾಣ ತಲುಪಬಹುದು.

ಸೋಮವಾರ ಮುಂಜಾನೆ 4.45ಕ್ಕೆ ತನ್ನ ಮೊದಲ ಪ್ರಯಾಣವನ್ನು ಕೆಲವು ಪ್ರಯಾಣಿಕರೊಂದಿಗೆ ಪ್ರಾರಂಭಿಸಿದ ಕೆಎಸ್‌ಆರ್-ದೇವನಹಳ್ಳಿ ಡೆಮು ರೈಲು ಬೆಳಗ್ಗೆ 5.50ಕ್ಕೆ ವಿಮಾನ ನಿಲ್ದಾಣಕ್ಕೆ ತಲುಪಿತು. ಇದೇ ರೈಲಿನಲ್ಲಿ ಸಂಸದ ಪಿ.ಸಿ. ಮೋಹನ್​ ಮತ್ತು ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳು ಪ್ರಯಾಣಿಸಿದರು.

ಕೆಎಸ್​ಆರ್​ ರೈಲು ನಿಲ್ದಾಣದಿಂದ ಹೊರಟ ಡೆಮು ರೈಲು, ವಿಮಾನ ನಿಲ್ದಾಣದಿಂದ ಮೂರು ಕಿ.ಮೀ. ದೂರದಲ್ಲಿರುವ ಹಾಲ್ಟ್​ ಸ್ಟೇಷನ್​ಗೆ ತಲುಪಲಿದ್ದು, ಅಲ್ಲಿಂದ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಲು ಉಚಿತ ಬಸ್​ ವ್ಯವಸ್ಥೆ ಕಲ್ಪಿಸಲಾಗಿದೆ. ಟ್ರಾಫಿಕ್​ ಕಿರಿಕಿರಿ ಇಲ್ಲದೆ ಈ ಡೆಮು ರೈಲಿನ ಮೂಲಕ ವಿಮಾನ ನಿಲ್ದಾಣಕ್ಕೆ ಸೋಮವಾರ ಬೆಳಗ್ಗೆ ತೆಳಿದ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದರು.

ವೇಳಾಪಟ್ಟಿ

1. ಕೆಎಸ್​ಆರ್​ ರೈಲು ನಿಲ್ದಾಣದಿಂದ ಬೆಳಗ್ಗೆ 4.45ಕ್ಕೆ ಹೊರಡುವ ರೈಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ(ಕೆಐಎ) ಹಾಲ್ಟ್ ಸ್ಟೇಷನ್​ಗೆ ಬೆಳಗ್ಗೆ 5.50ಕ್ಕೆ ತಲುಪಲಿದೆ.

2. ಕೆಎಸ್ಆರ್​ನಿಂದ ಬೆಳಗ್ಗೆ 9ಕ್ಕೆ ಹೊರಡುವ ರೈಲು ಬೆಳಗ್ಗೆ 10.05ಕ್ಕೆ ಕೆಐಎ ಹಾಲ್ಟ್ ಸ್ಟೇಷನ್ ತಲುಪಲಿದೆ.

3. ಯಲಹಂಕ ನಿಲ್ದಾಣದಿಂದ ಬೆಳಗ್ಗೆ 7ಕ್ಕೆ ಹೊರಡುವ ರೈಲು ಬೆಳಗ್ಗೆ 7.20ಕ್ಕೆ ಕೆಐಎ ಹಾಲ್ಟ್ ಸ್ಟೇಷನ್ ತಲುಪಲಿದೆ.

ಟಿಕೆಟ್​ ದರ

ಯಶವಂತಪುರ ಮೂಲಕ ಕೆಎಸ್ಆರ್​ನಿಂದ ಮಾರ್ಗವಾಗಿ ಕೆಐಎ ಹಾಲ್ಟ್ ಸ್ಟೇಷನ್​ಗೆ ಹೋಗುವ ರೈಲಿನ ಟಿಕೆಟ್​ ದರ 10 ರೂಪಾಯಿ. ಬೈಯಪ್ಪನಹಳ್ಳಿ ಮೂಲಕ ಕೆಎಸ್ಆರ್​ನಿಂದ 15 ರೂಪಾಯಿ. ಯಲಹಂಕದಿಂದ ಕೆಐಎ ಹಾಲ್ಟ್ ಸ್ಟೇಷನ್​ಗೆ​ 10 ರೂಪಾಯಿ.