ಕಿಂಡಿ ಅಣೆಕಟ್ಟಿನಲ್ಲಿ ನೀರು ಸೋರಿಕೆ ತಡೆಯುವಂತೆ ಆಗ್ರಹಿಸಿ ಶಾಂತಿಮೊಗರಿನಲ್ಲಿ ಗ್ರಾಮಸ್ಥರಿಂದ ಪ್ರತಿಭಟನೆ ನಡೆಯಿತು. ಕಾಂಗ್ರೆಸ್ ಮುಖಂಡ ಪ್ರವೀಣ್ ಕುಮಾರ್ ಕೆಡೆಂಜಿ, ಬಿಜೆಪಿ ಮುಖಂಡ ರಾಕೇಶ್ ರೈ ಕೆಡೆಂಜಿ, ಕೃಷಿಕ ರಾಜರಾಮ್ ಭಟ್ ಇದ್ದರು.  
ಜಿಲ್ಲೆ

ಕಿಂಡಿ ಅಣೆಕಟ್ಟಿನಲ್ಲಿ ನೀರು ಸೋರಿಕೆ ತಡೆಗೆ ಆಗ್ರಹ

ವಿಜಯವಾಣಿ ಸುದ್ದಿಜಾಲ ಕಡಬ

ಕುದ್ಮಾರು ಶಾಂತಿಮೊಗರು ಸೇತುವೆ ಸಮೀಪ ಕುಮಾರಧಾರಾ ನದಿಗೆ ಅಣೆಕಟ್ಟಿಯಲ್ಲಿ ಕಿಡಿಗೇಡಿಗಳ ಕೃತ್ಯದಿಂದಾಗಿ ನದಿ ಬರಿದಾಗಿದೆ. ಸಮಯಕ್ಕೆ ಸರಿಯಾಗಿ ಹಲಗೆ ಜೋಡಣೆ ಮಾಡದೇ ಕೃಷಿಕರಿಗೆ ಅನ್ಯಾಯ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಸ್ಥರ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂದು ಆಗ್ರಹಿಸಿ ಶಾಂತಿಮೊಗರು ಸೇತುವೆ ಬಳಿ ಶುಕ್ರವಾರ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.

ಸೇತುವೆ ಬಳಿ ಪ್ರತಿಭಟನಾಕಾರರು ಜಮಾಯಿಸಿದರು. ಬಳಿಕ ಕೆಲ ಕಾಲ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಕಡಬ ತಹಸೀಲ್ದಾರ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಈ ಉತ್ತರಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ತಕ್ಷಣಕ್ಕೆ ಸರಿಪಡಿಸಿಕೊಡಬೇಕೆಂದು ಆಗ್ರಹಿಸಿ ಸೂಕ್ತ ಪರಿಹಾರ ನೀಡಿ ಎಂದರು. ಮುಂದಿನ ವಾರದೊಳಗೆ ಸಂಬಂದಪಟ್ಟವರ ಸಭೆ ಕರೆದು ದುರಸ್ತಿಪಡಿಸಲಾಗುವುದು ಎಂದು ತಹಸೀಲ್ದಾರರು ತಿಳಿಸಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು. ಕಾಣಿಯೂರು, ಬೆಳಂದೂರು, ಚಾರ್ವಾಕ, ಸವಣೂರು, ಆಲಂಕಾರು, ಪೆರಾಬೆ ಮೊದಲಾದ ಗ್ರಾಮಗಳ ಪ್ರಮುಖರು, ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕಡಬ ತಾಲೂಕು ಕಚೇರಿ ಉಪತಹಸೀಲ್ದಾರ್ ಮನೋಹರ್ ಕೆ.ಟಿ.ಇದ್ದರು. ಕಡಬ ಪೊಲೀಸರು ಬಂದೊಬಸ್ತು ಒದಗಿಸಿದರು. ಹೋರಾಟ ಮುಖಂಡ ಜನಾರ್ದನ ಕಯ್ಯಪೆ ಪ್ರಸ್ತಾವಿಸಿ, ಸ್ವಾಗತಿಸಿದರು.

ಪ್ರತಿಭಟನಾಕಾರರ ಆಗ್ರಹ

7.5 ಕೋಟಿ ರೂ. ವೆಚ್ಚದಲ್ಲಿ ಪಶ್ಚಿಮವಾಹಿನಿ ಯೋಜನೆಯ ಸಣ್ಣ ನೀರಾವರಿ ಇಲಾಖೆಯಡಿಯಲ್ಲಿ ನಿರ್ಮಾಣವಾಗಿರುವ ಕಿಂಡಿ ಅಣೆಕಟ್ಟಿನಲ್ಲಿ ಕಿಡಿಗೇಡಿಗಳ ಕೃತ್ಯದಿಂದ ನೀರಿಲ್ಲದೆ ಬರಿದಾಗಿದೆ. ಕಳೆದ ಬಾರಿಯೂ ಅಣೆಕಟ್ಟಿಗೆ ಹಲಗೆ ಜೋಡಿಸುವ ಕಾರ್ಯ ವಿಳಂಬವಾದ್ದರಿಂದ ಕೃಷಿಕರಿಗೆ ತೊಂದರೆಯಾಗಿತ್ತು. ಈ ವರ್ಷವೂ ಕಿಂಡಿ ಅಣೆಕಟ್ಟಿನ ಹಲಗೆ ಕಿಡಿಗೇಡಿಗಳು ವಿರೂಪಗೊಳಿಸಿದ್ದರಿಂದ ನೀರು ಸೋರಿಕೆಯಿಂದ ಫಲಾನುಭವಿಗಳಿಗೆ ತೊಂದರೆಯಾಗುತ್ತಿದೆ. ಯಾವುದೇ ಸಬೂಬು ನೀಡದೆ ತಕ್ಷಣ ಹಲಗೆ ಸರಿಪಡಿಸಬೇಕು ಇಲ್ಲವಾದಲ್ಲಿ ಹೋರಾಟ ಕೈಗೊಳ್ಳಲಾಗುವುದು. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆದರೆ ಸಂಬಂಧಪಟ್ಟ ಅಧಿಕಾರಿಗಳು ಹೊಣೆಯಾಗುತ್ತಾರೆ. ಜನರ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸಬೇಕೆಂದು ಕಾಂಗ್ರೆಸ್ ಮುಖಂಡ ಪ್ರವೀಣ್ ಕುಮಾರ್ ಕೆಡೆಂಜಿ, ಬಿಜೆಪಿ ಮುಖಂಡ ರಾಕೇಶ್ ರೈ ಕೆಡೆಂಜಿ, ಕೃಷಿಕ ರಾಜಾರಾಮ್ ಭಟ್ ಆಗ್ರಹಿಸಿದರು.