More

    ಟ್ಯಾಂಕರ್​ ಮಾಫಿಯಾ ಮುನ್ನೆಲೆಗೆ, ನಗರದಲ್ಲೀಗ ಟ್ಯಾಂಕರ್​ಗಳದ್ದೇ ಅಬ್ಬರ, ದುಪ್ಪಟ್ಟು ಹಣ ನೀಡಿದರೆ ಮಾತ್ರ ಟ್ಯಾಂಕರ್​ ನೀರು

    ಶ್ರವಣ್​ಕುಮಾರ್​ ನಾಳ, ಮಂಗಳೂರು

    ತುಂಬೆ ಡ್ಯಾಂನಲ್ಲಿ ನೇತ್ರಾವತಿ ನದಿಯ ಒಳಹರಿವು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಮಂಗಳೂರಿಗೆ ವಾಟರ್​ ರೇಷನಿಂಗ್​ ವ್ಯವಸ್ಥೆ ಜಾರಿಗೊಂಡಿದ್ದೇ ತಡ ಟ್ಯಾಂಕರ್​ ಮಾಫಿಯಾ ಮುನ್ನೆಲೆ ಬಂದಿದೆ. ಸಧ್ಯಕ್ಕೆ ಮಂಗಳೂರಿನಲ್ಲಿ ದುಪ್ಪಟ್ಟು ಹಣ ನೀಡಿದರೆ ಮಾತ್ರ ಟ್ಯಾಂಕರ್​ ನೀರು ಎಂಬ ಸ್ಥಿತಿ ನಿರ್ಮಾಣಗೊಂಡಿದೆ.

    ಕಳೆದ 2 ತಿಂಗಳ ಹಿಂದೆ 2 ಸಾವಿರ ಲೀಟರ್​ ಟ್ಯಾಂಕರ್​ ನೀರಿಗೆ 500 ರೂ., 8 ಸಾವಿರ ಲೀಟರ್​ ಟ್ಯಾಂಕರ್​ ನೀರಿಗೆ 2500ರೂ ಇತ್ತು. ಮೇ 5ರಿಂದ ಜಿಲ್ಲಾಡಳಿತೆದಿಂದ ಎರಡು ದಿನಗಳಿಗೊಮ್ಮೆ ನೀರು ಪೂರೈಕೆಗೆ ಕ್ರಮ ಕೈಗೊಂಡದಿನಿಂದ 2 ಸಾವಿರ ಲೀಟರ್​ ಟ್ಯಾಂಕರ್​ ನೀರಿಗೆ 1000 ರೂ., 8 ಸಾವಿರ ಲೀಟರ್​ ಟ್ಯಾಂಕರ್​ ನೀರಿಗೆ 4500ರೂ ಏರಿಕೆಯಾಗಿದೆ. ಸಧ್ಯಕ್ಕೆ ಮಂಗಳೂರಿನಲ್ಲಿ ಹೆಚ್ಚು ಹಣ ನೀಡಿದರೆ ಮಾತ್ರ ಟ್ಯಾಂಕರ್​ ನೀರು ಲಭ್ಯ. ಈ ಮಧ್ಯೆ ಪಾಲಿಕೆಯಿಂದಲೂ ಎತ್ತರದ ಪ್ರದೇಶಗಳಿಗೆ ಟ್ಯಾಂಕರ್​ ಮೂಲಕ ಉಚಿತವಾಗಿ ನೀರು ಪೂರೈಸಲಾಗುತ್ತಿದೆ.

    *56 ಬಾವಿ ಗುರುತು

    ಪಾಲಿಕೆ ವ್ಯಾಪ್ತಿಯಲ್ಲಿ ಬಳಸಲು ಯೋಗ್ಯ 56 ಬಾವಿಗಳನ್ನು ಗುರುತಿಸಲಾಗಿದ್ದು, ತುರ್ತು ಸಂದರ್ಭ ಬಳಸಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಆದರೆ ಈ ಮಾಸಾಂತ್ಯ ತನಕ ತೆರೆದ ಬಾವಿಗಳ ನೀರು ಸಾರ್ವಜನಿಕರ ಬಳಕೆಗೆ ಉದ್ದೇಶಿಸಿಲ್ಲ. ಪಾಲಿಕೆಯ ಹಲವೆಡೆ, ಮುಖ್ಯವಾಗಿ ಎತ್ತರದ ಪ್ರದೇಶಗಳಿಗೆ ಈಗಾಗಲೇ ಟ್ಯಾಂಕರ್​ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ರೇಷನಿಂಗ್​ ಆಧಾರದಲ್ಲಿ ದೊಡ್ಡ ವಸತಿ ಸಮುಚ್ಚಯಗಳಿಗೆ ದಿನಂಪ್ರತಿ 10 ಟ್ಯಾಂಕರ್​ಗಳಿಗಿಂತಲೂ ಅಧಿಕ ನೀರು ಪೂರೈಸಲಾಗುತ್ತಿದೆ. ಪ್ರಸ್ಥುತ ಲಾಲ್​ಬಾಗ್​ ಸಮೀಪವಿರುವ ವಾಟರ್​ಗೇಟ್​ನಿಂದ ಟ್ಯಾಂಕರ್​ಗಳಿಗೆ ನೀರು ತುಂಬಿಸಲು ವ್ಯವಸ್ಥೆ ಮಾಡಲಾಗಿದೆ.

    ಗುಣಮಟ್ಟ ಇಲ್ಲದ ಬಾವಿಯಿಂದ ನೀರು ಪೂರೈಕೆ

    ಬಹುತೇಕ ಟ್ಯಾಂಕರ್​ಗಳ ಮೂಲಕ ಗುಣಮಟ್ಟ ಇಲ್ಲದ ಬಾವಿಯಿಂದ ನೀರು ಪೂರೈಕೆ ಮಾಡಲಾಗುತ್ತಿದೆ ಎಂಬ ಆರೋಪ ಇದೆ.  ಪಾಲಿಕೆ ಗುರುತಿಸಿದ 56 ಬಾವಿಗಳ ನೀರು ಸಾರ್ವಜನಿಕರ ಬಳಕೆಗೆ ಉಪಯೋಗಿಸಲು ಪರೀಕ್ಷೆ ನಡೆಸಲಾಗಿಲ್ಲ. ಜತೆಗೆ ನಗರದಲ್ಲಿ 58ಕ್ಕೂ ಅಧಿಕ ಖಾಸಗಿ ನೀರಿನ ಮೂಲಗಳಿದ್ದು, ಇಲ್ಲಿಂದಲೇ ಖಾಸಗಿ ಟ್ಯಾಂಕರ್​ಗಳ ಮೂಲಕ ನೀರು ಸರಬರಾಜು ಆಗುತ್ತಿದೆ. ವಿಪರ್ಯಾಸವೆಂದರೆ ಈ ಬಾವಿಗಳ ನೀರು ಕುಡಿಯಲು ಯೋಗ್ಯವೇ ಎಂಬ ವರದಿಯೂ ಯಾರಲ್ಲೂ ಇಲ್ಲ.

    ನೀರು ಪೂರೈಕೆ ಸಂಸ್ಥೆಗಳ ಪೈಪೊಟಿ

    ಮಂಗಳೂರು ನಗರದ ಶಕ್ತಿನಗರ, ಚಿಲಿಂಬಿಗುಡ್ಡ, ಯೆಕ್ಕೂರು, ಯೆಯ್ಯಾಡಿ, ಪಚ್ಚನಾಡಿ ಪ್ರದೇಶಗಳಿಗೆ ಈಗಾಗಲೇ ನೀರಿನ ಬಿಸಿ ತಟ್ಟಿದೆ. ಈಗಾಗಲೇ ಈ ಪ್ರದೇಶಗಳಿಗೆ ಪಾಲಿಕೆ ಟ್ಯಾಂಕರ್​ ಮೂಲಕ ನೀರು ಸರಬರಾಜಾಗುತ್ತಿದೆ. ನೀರು ಕೊರತೆ ಪ್ರದೇಶಗಳಲ್ಲಿ ಖಾಸಗಿ ಟ್ಯಾಂಕರ್​ ನೀರು ಪೂರೈಕೆ ಸಂಸ್ಥೆಗಳ ಪೈಪೊಟಿ ಹೆಚ್ಚಾಗತೊಡಗಿದೆ. ಅಗತ್ಯ ಇರುವ ಕಡೆ ಖಾಸಗಿ ನೀರಿನ ಟ್ಯಾಂಕರ್​ಗಳು ನೀರು ಪೂರೈಸುತ್ತವೆ, ಆದರೆ ಶುದ್ದತೆ, ಕುಡಿಯಲು ಯೋಗ್ಯತೆ ಪ್ರಮಾಣಪತ್ರ ಇಲ್ಲದ ನೀರಿನ ಮೂಲಗಳಿಂದ ಈ ನೀರಿನ ಟ್ಯಾಂಕರ್​ಗಳು ನೀರು ಪೂರೈಕೆ ಮಾಡುತ್ತಿದೆ ಎಂಬ ಆರೋಪ ಇದೆ. ಏಪ್ರಿಲ್​&ಮೇ ತಿಂಗಳಲ್ಲಿ ತುಂಬೆಯಲ್ಲಿ ನೀರಿನ ಕೊರತೆಯಿಂದ ಮಂಗಳೂರು ಮಹಾನಗರಪಾಲಿಕೆಯ ನೀರು ಸರಬರಾಜು ವ್ಯವಸ್ಥೆ ತೊಡಕಾಗುತ್ತದೆ ಎಂಬ ಸುಳಿವು ಕಳೆದ 40 ದಿನಗಳ ಮೊದಲೇ ಮುಸೂಚನೆಯಿದ್ದರೂ ಪರ್ಯಾಯ ನೀರಿನ ಮೂಲ ಬಳಕೆಗೆ ಇನ್ನೂ ಸಿದ್ದತೆ ನಡೆಸಿಲ್ಲ.ಸಧ್ಯಕ್ಕಂತೂ ನಗರ ವ್ಯಾಪ್ತಿಯಲ್ಲಿರುವ 56 ಬಾವಿಗಳನ್ನೇ ಪಾಲಿಕೆ ನೆಚ್ಚಿಕೊಳ್ಳುವುದು ಅನಿವಾರ್ಯ.

    ಗುಣಮಟ್ಟ ಇಲ್ಲದ ಹಾಗೂ ಶುಚಿತ್ವ ಇಲ್ಲದೆ ಬೇಕಾಬಿಟ್ಟಿ ಟ್ಯಾಂಕರ್​ಗಳಲ್ಲಿ ನೀರು ತುಂಬಿಸಿ ಸರಬರಾಜು ಮಾಡುವ ಸಂಸ್ಥೆಗಳ ಮೇಲೆ ಕಣ್ಣಿಡಲಾಗಿದೆ. ಗುಣಮಟ್ಟದ ನೀರನ್ನೇ ಸರಬರಾಜು ಮಾಡುವಂತೆ ನೀರು ಪೂರೈಕಾ ಸಂಸ್ಥೆಗಳಿಗೆ ಸೂಚಿಸಲಾಗಿದೆ.

    > ಆನಂದ್​,

    ಕಮಿಷನರ್​, ಮನಪಾ ಮಂಗಳೂರು

    ಟ್ಯಾಂಕರ್​ ಮೂಲಕ ನೀರು ಪೂರೈಕೆ ಮಾಡುವ ಖಾಸಗಿ ಸಂಸ್ಥೆಗಳು ನೀರಿನ ಶುದ್ದತೆ ಹಾಗೂ ಗುಣಮಟ್ಟ ಕಾಪಾಡಿಕೊಳ್ಳುವ ಬಗ್ಗೆ ಈ ಹಿಂದೆಯೇ ಷರತ್ತು ವಿಧಿಸಿ ಪರವಾಣಗಿ ನೀಡಲಾಗಿದೆ. ಅನಧಿಕೃತ ನೀರು ಪೂರೈಕಾ ಸಂಸ್ಥೆಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

    > ಸುಧೀರ್​ ಶೆಟ್ಟಿ ಕಣ್ಣೂರು, ಮೇಯರ್

    ಮಂಗಳೂರು ಮಹಾನಗರ ಪಾಲಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts