ಜಿಲ್ಲೆ

ಕಾಡಿನಿಂದ ನಾಡಿಗೆ ಬಂದ ಜಿಂಕೆ! ಸುರಕ್ಷಿತವಾಗಿ ಅರಣ್ಯ ಇಲಾಖೆಗೆ ಒಪ್ಪಿಸಿದ ಗ್ರಾಮಸ್ಥರು | Deer

ಮೋಹನ್​ ಶೆಟ್ಟಿ

ಚಾಮರಾಜನಗರ: ಸಾಮಾನ್ಯವಾಗಿ ಕಾಡಿನಿಂದ ನಾಡಿನತ್ತ ಬರುವ ವನ್ಯಜೀವಿಗಳು ಆಹಾರ ಅರಸಿಯೇ ಬಂದಿರುತ್ತವೆ. ಇದನ್ನು ಅರಿಯದ ಬಹುತೇಕರು, ತಮ್ಮನ್ನು ಅಥವಾ ತಮ್ಮ ಕುಟುಂಬಸ್ಥರನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಾಣಿಗಳನ್ನು ವಾಪಾಸ್​ ಕಾಡಿಗೆ ಓಡಿಸುವ ಪ್ರಯತ್ನಗಳನ್ನು ಕೈಗೊಳ್ಳುತ್ತಾರೆ. ಓಡಿಸುವ ಭರದಲ್ಲಿ ಒಂದಷ್ಟು ಪ್ರಾಣಿಗಳನ್ನು ಕೊಲ್ಲುತ್ತಾರೆ. ಇದು ಮಾನವ-ಪ್ರಾಣಿ ಸಂಘರ್ಷಕ್ಕೆ ದೊಡ್ಡ ನಿದರ್ಶನವಾಗಿ ಉಳಿಯುತ್ತವೆ.

ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿ ಅರಣ್ಯ ಪ್ರದೇಶಗಳ ಸುತ್ತಮುತ್ತಲಿನ ಊರು, ಮಲೆನಾಡಿನ ಭಾಗಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿವೆ. ಮಲೆನಾಡಿನಲ್ಲಿ ಆನೆಗಳ ಹಿಂಡು ರೈತರ ಜಮೀನು, ತೋಟಗಳಿಗೆ ನುಗ್ಗಿ, ಬೆಳೆ ನಾಶಗೊಳಿಸಿದರೆ, ಕೆಲವೆಡೆ ಕಾಡು ಕೋಣ, ಚಿರತೆ, ಹುಲಿಗಳು ಮೂಡ ಸೀಮೆ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತವೆ. ಅರಣ್ಯ ಪ್ರದೇಶಗಳಾದ ಚಾಮರಾಜನಗರ ಜಿಲ್ಲೆಗಳಲ್ಲಿ ಇಂತಹ ಪ್ರಕರಣಗಳು ತೀರ ಸಾಮಾನ್ಯವಾಗಿದೆ. ಕಾಡಿನಿಂದ ಗ್ರಾಮದತ್ತ ಓಡಿ ಬಂದ ಜಿಂಕೆಯೊಂದು ಗಾಬರಿಯಿಂದ ಎಲ್ಲೆಡೆ ಜಿಗಿದಾಡಿದ್ದು, ಸದ್ಯ ಗ್ರಾಮಸ್ಥರ ಸಹಾಯದಿಂದ ಅದನ್ನು ಅರಣ್ಯಕ್ಕೆ ವಾಪಾಸ್ ಬಿಡಲಾಗಿದೆ.

ಚಾಮರಾಜನಗರ ತಾಲೂಕಿನ ಬದನಗುಪ್ಪೆ ಗ್ರಾಮವೊಂದಕ್ಕೆ ಬಂದಿದ್ದ ಜಿಂಕೆಯನ್ನು ಗ್ರಾಮಸ್ಥರು ಸುರಕ್ಷಿತವಾಗಿ ಹಿಡಿದು, ತದನಂತರ ಅರಣ್ಯ ಇಲಾಖೆಗೆ ಕರೆ ಮಾಡಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಜಿಂಕೆ ಬಗ್ಗೆ ಮಾಹಿತಿ ಪಡೆದ ಬೆನ್ನಲ್ಲೇ ಸ್ಥಳಕ್ಕೆ ಧಾವಿಸಿದ ಅರಣ್ಯ ಅಧಿಕಾರಿಗಳು, ಗ್ರಾಮಸ್ಥರು ರಕ್ಷಿಸಿದ್ದ ಜಿಂಕೆಯನ್ನು ಮತ್ತೆ ಕಾಡಿಗೆ ಬಿಟ್ಟಿದ್ದಾರೆ. ಪ್ರಾಣಿಗೆ ಯಾವುದೇ ರೀತಿಯಲ್ಲಿಯೂ ಹಿಂಸಿಸದೆ, ಅದನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ ಗ್ರಾಮಸ್ಥರಿಗೆ ಅಧಿಕಾರಿಗಳು ಧನ್ಯವಾದ ತಿಳಿಸಿದ್ದಾರೆ.