ಪುಷ್ಪಗಳಿಂದ ಕಂಗೊಳಿಸಿದ ಕುಕ್ಕೆ ದೇವಳ : ಭಕ್ತರಿಂದ ಸೇವೆ : 9 ಲಕ್ಷ ರೂ. ವೆಚ್ಚದಲ್ಲಿ ಅಲಂಕಾರ

New Project (1)
Published on

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳಕ್ಕೆ ಹೊಸ ವರ್ಷದ ಅಂಗವಾಗಿ ಭಕ್ತರು ಪುಷ್ಪಾಲಂಕಾರ ಸೇವೆ ನೆರವೇರಿಸಿದ್ದಾರೆ.

ಬೆಂಗಳೂರಿನ ಉದ್ಯಮಿಗಳಾದ ಟಿ.ಎನ್.ಮಂಜುನಾಥ್, ಉಮೇಶ್, ಬಾಲಾಜಿ, ಶರತ್ ಬಾಬು, ಶೋಭನಾದ್ರಿ, ಕೃಷ್ಣಮೂರ್ತಿ, ರಾಜಣ್ಣ, ಪ್ರಸಾದ್, ಧರಣಿ ಸೇವೆ ನೆರವೇರಿಸಿದರು. 2018ರಿಂದ ಸೇವೆ ಆರಂಭಿಸಿದ್ದ ಅವರು ಕಳೆದ ವರ್ಷ 5 ಲಕ್ಷ ರೂ. ವೆಚ್ಚದಲ್ಲಿ ಪುಷ್ಪಾಲಂಕಾರ ಮಾಡಿದ್ದರು. ಈ ವರ್ಷ 9 ಲಕ್ಷ ರೂ. ವೆಚ್ಚದಲ್ಲಿ ಅಲಂಕಾರ ಮಾಡಿದ್ದಾರೆ. ಅಲ್ಲದೆ ಅತ್ಯಧಿಕ ಪ್ರಮಾಣದಲ್ಲಿ ಪುಷ್ಪಾಲಂಕಾರ ಮಾಡಿದ್ದಾರೆ.

ಅರ್ಧಚಂದ್ರಾಕೃತಿ ರಚನೆ: ದ್ವಾರದ ಎದುರು ಅರ್ಧಚಂದ್ರಾಕೃತಿಯಲ್ಲಿ ಹೂವಿನ ಅಲಂಕಾರ ಮಾಡಲಾಗಿದೆ. ಇದರ ಮೇಲೆ ಷಣ್ಮುಖನ ಪುತ್ಥಳಿ ಇರಿಸಲಾಗಿದೆ. ಇಲ್ಲಿ 5 ಬಗೆಯ ಹೂವು ಬಳಸಲಾಗಿದೆ. ಸುಗಂಧರಾಜ ಸಹಿತ ಇತರ ಹೂವುಗಳನ್ನು ಆಕರ್ಷಕವಾಗಿ ಪೋಣಿಸಲಾಗಿದೆ. ಇದಕ್ಕೆ ಅಲ್ಲಲ್ಲಿ ಹಣ್ಣುಗಳನ್ನು ಪೋಣಿಸಲಾಗಿದ್ದು, ದೇವಳದ ಸೌಂದರ್ಯ ಇಮ್ಮಡಿಗೊಳಿಸಿದೆ.

ಹೂ-ತರಕಾರಿಗಳ ಸಮ್ಮಿಲನ: ಹೂ, ತರಕಾರಿ, ತೆಂಗಿನ ಗರಿ, ಸಿರಿ, ಹೂವಿನ ಎಲೆಗಳನ್ನು ಉಪಯೋಗಿಸಿಕೊಂಡು ಅಲಂಕಾರ ಮಾಡಲಾಗಿದೆ. ಸುಗಂಧರಾಜ, ಚೆಂಡು ಹೂ, ಸೇವಂತಿಗೆ, ಗುಲಾಬಿ, ಬಿಳಿ ಸೇವಂತಿಗೆ, ಬಿಳಿ ಚೆಂಡು ಹೂ, ಜೀನ್ಯವನ್ನು ಉಪಯೋಗಿಸಲಾಗಿದೆ. ಅಲ್ಲದೆ ಜೋಳ, ಅನನಾಸು, ದಾಳಿಂಬೆ, ಕಿತ್ತಾಳೆ, ಕರ್ಬೂಜ, ಮುಸುಂಬಿ, ಬಾಳೆಹಣ್ಣು, ಜೋಳದ ತೆನೆ, ಭತ್ತದ ತೆನೆ ಬಳಸಿಕೊಂಡು ಆಕರ್ಷಕ ವಿನ್ಯಾಸ ಮಾಡಲಾಗಿದೆ.

6 ವರ್ಷಗಳಿಂದ ದೇವರ ಸೇವೆ ಮಾಡುತ್ತಿದ್ದೇವೆ. ಈ ಬಾರಿ 7ನೇ ವರ್ಷ ಸುಮಾರು 8ರಿಂದ 9 ಲಕ್ಷ ರೂ. ವೆಚ್ಚದಲ್ಲಿ ಶೃಂಗಾರ ಮಾಡಲಾಗಿದೆ. ಪ್ರಾಕೃತಿಕ ವಸ್ತು, ತರಕಾರಿ, ಭತ್ತದ ತೆನೆ, ಜೋಳದ ತೆನೆ ಬಳಸಲಾಗಿದೆ. ಸ್ನೇಹಿತರೆಲ್ಲ ಸೇರಿಕೊಂಡು ಸೇವೆ ಮಾಡುತ್ತಿದ್ದೇವೆ ಇದರಿಂದ ಒಳಿತಾಗಿದೆ. ದೇವರ ಅಲಂಕಾರಕ್ಕೆ 5 ಬಗೆಯ ಹೂವನ್ನು ಸಮರ್ಪಿಸಲಾಗಿದೆ. ಟಿ.ಎನ್.ಮಂಜುನಾಥ್ ಬೆಂಗಳೂರು, ಸೇವಾರ್ಥಿ

ತೆಂಗಿನ ಸಿರಿಯ ಅಲಂಕಾರ

ಶ್ರೀ ದೇವಳದ ಒಳಾಂಗಣ ಪ್ರವೇಶ ಸ್ಥಳದಲ್ಲಿ ಆಕರ್ಷಕ ದ್ವಾರ ನಿರ್ಮಿಸಿದ್ದಾರೆ. ತೆಂಗಿನ ಸಿರಿ, ತೆಂಗಿನ ಗರಿಯನ್ನು ಉಪಯೋಗಿಸಿಕೊಂಡು ಬೃಹತ್ ದ್ವಾರ ರಚಿಸಲಾಗಿದೆ. ಇದಕ್ಕೆ ಅಲ್ಲಲ್ಲಿ ಸಿರಿಯಿಂದ ಮಾಡಿದ ಹೂವುಗಳನ್ನು ಪೋಣಿಸಲಾಗಿದೆ. ಹೂವಿನ ಗೊಂಡೆ, ಸಿರಿಯಿಂದ ರಚಿತವಾದ ಜೊಂಗೆ ಹೂವುಗಳನ್ನು ಅಲ್ಲಲ್ಲಿ ಜೋಡಿಸಲಾಗಿದೆ. ದ್ವಾರದ ಕಂಬವನ್ನು ತೆಂಗಿನ ಗರಿ, ಸಿರಿಯನ್ನು ಉಪಯೋಗಿಸಿಕೊಂಡು ರಚಿಸಲಾಗಿದೆ. ಸುಬ್ರಹ್ಮಣ್ಯನ ವಾಹನವಾದ ನವಿಲನ್ನು ಸಿರಿ, ಗರಿಯಿಂದ ಮಾಡಿ ದ್ವಾರದ ಇಕ್ಕೆಲದಲ್ಲಿ ಇರಿಸಲಾಗಿದೆ. ಇದು ದ್ವಾರದ ಸೌಂದರ್ಯ ಇಮ್ಮಡಿಗೊಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net