ವಿಜಯವಾಣಿ ಸುದ್ದಿಜಾಲ ಬಾಳೆಹೊನ್ನೂರು
ಧರ್ಮಸ್ಥಳವನ್ನು ಶವ ಹೂಳುವ ಪ್ರಕರಣದಲ್ಲಿ ಸಿಲುಕಿಸಿ ಪುಣ್ಯಕ್ಷೇತ್ರವನ್ನು ರಾಜ್ಯ ಸರ್ಕಾರದ ವಶಕ್ಕೆ ಕೊಡಿಸಬೇಕು ಎಂದು ಎಡಪಂಥೀಯರು ಮಾಡುತ್ತಿರುವ ಷಡ್ಯಂತ್ರ ಹಾಗೂ ದೊಡ್ಡ ನಾಟಕ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.
ಎಡಪಂಥೀಯರ ಇಂಥ ಷಡ್ಯಂತ್ರಕ್ಕೆ ಪ್ರಕೃತಿಯೂ ಅವರಿಗೆ ಬೆಂಬಲ ಕೊಟ್ಟಿಲ್ಲ. ಎಲ್ಲೂ ಅಸ್ಥಿಪಂಜರ ಸಿಕ್ಕಿಲ್ಲ. ಅಲ್ಲೊಂದು ಇಲ್ಲೊಂದು ಎಲುಬಿನ ಚೂರುಗಳು ಸಿಕ್ಕಿವೆ ಎಂದು ರಂಭಾಪುರಿ ಪೀಠದಲ್ಲಿ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
ಅನಾಮಿಕ ತೋರಿಸುವ ಜಾಗವನ್ನು ಇನ್ನೂ ಅಗೆಯುತ್ತೇವೆ ಎಂದು ಎಸ್‌ಐಟಿ ಹೇಳುತ್ತಿದೆ. ಅಗೆಯಲು ಕೆಲವರು ಒತ್ತಡ ಹೇರುತ್ತಿದ್ದಾರೆ. ರಾಜ್ಯ ಸರ್ಕಾರ ಇದ್ಯಾವುದಕ್ಕೂ ಬಗ್ಗಬಾರದು. ಅನಾಮಿಕನನ್ನು ಬಂಧಿಸಿದರೆ ಯಾರ‌್ಯಾರು ಇದರ ಹಿಂದಿದ್ದಾರೆ ಎಂದು ತಿಳಿಯುತ್ತದೆ. ಧರ್ಮಸ್ಥಳವನ್ನು ರಾಜ್ಯ ಸರ್ಕಾರದ ವಶಕ್ಕೆ ತೆಗೆದುಕೊಳ್ಳುವ ಪ್ರಯತ್ನವಾಗಲಿ, ವೀರೇಂದ್ರ ಹೆಗ್ಗಡೆ ಅವರಿಗೆ ತೊಂದರೆ ಕೊಡುವ ಪ್ರಯತ್ನವಾಗಲಿ ಮಾಡಿದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಒಂದು ದಿನವೂ ಉಳಿಯುವುದಿಲ್ಲ. ಸರ್ಕಾರವೂ ಇರುವುದಿಲ್ಲ ಎಂದು ಎಚ್ಚರಿಸಿದರು.
ಸತ್ಯ ಹೊರಬರಲಿ
ಧರ್ಮಸ್ಥಳದ ಕುರಿತು ಅಪಪ್ರಚಾರದ ಘಟನೆ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದ್ದು, ಒಂದು ಬಾರಿ ಇದು ಬಗೆಹರಿಯುವುದು ಒಳ್ಳೆಯದು ಎನ್ನುವುದು ನನ್ನ ಅಭಿಪ್ರಾಯ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು. ಧರ್ಮಸ್ಥಳದಲ್ಲಿ ಯಾವುದೇ ಶವ ಹೂತಿಲ್ಲ. ಇದರಲ್ಲಿ ವೀರೇಂದ್ರ ಹೆಗ್ಗಡೆ ಪಾತ್ರವಿಲ್ಲ ಎಂಬುದು ಹೊರಬರಬೇಕಿದೆ. ಧರ್ಮಸ್ಥಳಕ್ಕೆ ಅಪಮಾನ ಆಗಕೂಡದು ಎಂಬ ಭಾವನೆ ಎಲ್ಲರಲ್ಲಿಯೂ ಇದ್ದು, ಈ ಘಟನೆಯ ತನಿಖೆಗೆ ಸರ್ಕಾರದಿಂದ ಲಕ್ಷಾಂತರ ರೂಪಾಯಿ ಖರ್ಚಾದರೂ ಪರವಾಗಿಲ್ಲ. ಇನ್ನೆಂದೂ ಧರ್ಮಸ್ಥಳ ಕುರಿತು ಅಪಪ್ರಚಾರ ಯಾರೂ ಮಾಡಕೂಡದು. ಈ ನಿಟ್ಟಿನಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.