

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಎಲ್ಲ ಜಾತಿ, ಧರ್ಮೀಯರು ಜತೆಯಾಗಿ ಆಚರಿಸುವ ಹಬ್ಬ ಮೊಸರುಕುಡಿಕೆ ಉತ್ಸವವಾಗಿದೆ. ಈ ಕಾರ್ಯಕ್ರಮ ಸಮಾಜದಲ್ಲಿ ಸೌಹಾರ್ದ ಮೂಡಿಸುವಲ್ಲಿ ಸಹಕಾರಿ ಎಂದು ಅಸೈಗೋಳಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ನ ಟ್ರಸ್ಟಿ ಮಂಜುನಾಥ ಆಳ್ವ ತೇವುನಾಡುಗುತ್ತು ಅಭಿಪ್ರಾಯಪಟ್ಟರು. ಅಸೈಗೋಳಿ ಸಾರ್ವಜನಿಕ ಮೊಸರುಕುಡಿಕೆ ಉತ್ಸವ ಸಮಿತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರುಕುಡಿಕೆ ಉತ್ಸವದ ಅಂಗವಾಗಿ ಅಸೈಗೋಳಿ ಕೇಂದ್ರ ಮೈದಾನದಲ್ಲಿ ಭಾನುವಾರ ‘ಕ್ರೀಡೋತ್ಸವ-2025’ ಉದ್ಘಾಟಿಸಿ ಮಾತನಾಡಿದರು. ಮಂಗಳ ಸೇವಾ ಟ್ರಸ್ಟ್ ಟ್ರಸ್ಟಿ ಅಬ್ದುಲ್ ರಹ್ಮಾನ್ ಕೋಡಿಜಾಲ್ ಅಧ್ಯಕ್ಷತೆ ವಹಿಸಿ, ಅಸೈಗೋಳಿ ಪರಿಸರದಲ್ಲಿ ಹಲವು ವರ್ಷಗಳಿಂದ ಒಂದೇ ತಾಯಿಯ ಮಕ್ಕಳಂತೆ ಮೊಸರುಕುಡಿಕೆ ಉತ್ಸವ ಆಚರಿಸುತ್ತಾ ಬರಲಾಗಿದೆ. ಸ್ಥಳೀಯರ ಸಂಘಟಿತ ಹೋರಾಟದಿಂದ ಅಸೈಗೋಳಿ ಮೈದಾನ ಉಳಿಯುವಂತಾಗಿದೆ ಎಂದರು. ಅಸೈಗೋಳಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀ ನಿವಾಸ ಶೆಟ್ಟಿ ಪುಲ್ಲು ಕ್ರೀಡಾಂಗಣ ಉದ್ಘಾಟಿಸಿದರು. ಸಮಾಜ ಸೇವಕ ಇಕ್ಬಾಲ್ ಸಾಮಾನಿಗೆ, ಪ್ರಗತಿಪರ ಕೃಷಿಕ ನಾರಾಯಣ ರೈ ಕಕ್ಕೆಮಜಲು, ರಂಗನಾಥ ಕಾಜವ, ಕೋಶಾಧಿಕಾರಿ ಕೃಷ್ಣಪ್ಪ ಕೊಣಾಜೆ, ಕ್ರೀಡಾ ಸಹಸಂಚಾಲಕ ಸನತ್ ರೈ ಮೊದಲಾದವರು ಉಪಸ್ಥಿತರಿದ್ದರು. ಕ್ರೀಡಾ ಸಂಚಾಲಕ ರಾಧಾಕೃಷ್ಣ ರೈ ಸ್ವಾಗತಿಸಿದರು. ಸಾರ್ವಜನಿಕ ಮೊಸರುಕುಡಿಕೆ ಉತ್ಸವ ಸಮಿತಿ ಗೌರವಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಪುಲ್ಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಮುದ್ದುಕೃಷ್ಣ ಸ್ಪರ್ಧಾ ಸಂಚಾಲಕ ಶಿವಕುಮಾರ್ ವಂದಿಸಿದರು. ತ್ಯಾಗಂ ಹರೇಕಳ ಕಾರ್ಯಕ್ರಮ ನಿರೂಪಿಸಿದರು.
ಜಾತಿ, ಧರ್ಮರಹಿತ, ಸಾಮರಸ್ಯ ಮೂಡಿಸುವಲ್ಲಿ ಕ್ರೀಡೆ ಪ್ರಮುಖ ಪಾತ್ರ ವಹಿಸುತ್ತದೆ, ಕಠಿಣ ಅಭ್ಯಾಸದಿಂದ ರಾಷ್ಟ್ರಮಟ್ಟದ ಕ್ರೀಡಾಪಟು ಆಗಲು ಸಾಧ್ಯ. ಇಂದಿನ ಸೋಲನ್ನು ಮುಂದಿನ ದಿನಗಳಲ್ಲಿ ಗೆಲುವಾಗಿ ಪರಿವರ್ತಿಸಲು ಕ್ರೀಡಾಪಟು ಶ್ರಮಿಸಬೇಕು. ಸಂತೋಷ್ ಕುಮಾರ್ ಶೆಟ್ಟಿ ಪುಲ್ಲು ಗೌರವಾಧ್ಯಕ್ಷ, ಸಾರ್ವಜನಿಕ ಮೊಸರುಕುಡಿಕೆ ಉತ್ಸವ ಸಮಿತಿ