ಅಡಕೆ ಕೃಷಿಕರಿಗೆ ಸೂಕ್ತ ಪರಿಹಾರ ಅಗತ್ಯ -  ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಬೇಡಿಕೆ

Published on

ಪುತ್ತೂರು: ನಿರಂತರವಾಗಿ ಸುರಿದ ಮಳೆಯಿಂದ ಶೇ.೯೦ರಷ್ಟು ಅಡಕೆ ಬೆಳೆ ನಾಶವಾಗಿದ್ದು, ತಕ್ಷಣ ಸಮಿತಿಯನ್ನು ರಚಿಸಿ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕು. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಹೇಳಿದರು.

ಕರಾವಳಿ ಭಾಗದಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದ್ದು, ಕೊಳೆರೋಗ ನಿಯಂತ್ರಣಕ್ಕೆ ಔಷಧ ಹೊಡೆಯಲು ಅಸಾಧ್ಯವಾಗಿದೆ. ಇದರಿಂದ ಹತಾಶರಾದ ರೈತರು ಸರ್ಕಾರದ ಪರಿಹಾರ ಕಡೆಗೆ ಆಶಾಭಾವನೆಯಿಂದ ನೋಡುತ್ತಿದ್ದಾರೆ. ಪ್ರಕೃತಿ ವಿಕೋಪದಲ್ಲಿ ಸೂಕ್ತ ಪರಿಹಾರ ನೀಡಬೇಕು. ಅಡಕೆ ಬೆಳೆಗಾರರ ೧ ವರ್ಷದ ಬೆಳೆಸಾಲ ಮನ್ನಾ, ಮಧ್ಯಮಾವಧಿ, ದೀರ್ಘಾವಧಿ ಸಾಲಗಳ ಕಂತು ಮನ್ನಾ ಮಾಡಬೇಕು. ೨೦೦೯ರ ಹಿಂದಿನ ಬೆಳೆಸಾಲ ಬಾಕಿ ಇದ್ದು, ಇದನ್ನು ಸಂಪೂರ್ಣ ಮನ್ನಾ ಮಾಡಬೇಕು. ತಕ್ಷಣ ಅಡಕೆ ಬೆಳೆಗಾರರಿಗೆ ವಿಶೇಷ ಸಾಲ ಯೋಜನೆ ಜಾರಿಗೆ ತರಬೇಕು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಿರಿಯರಾದ ಡಾ.ಶರಶ್ಚಂದ್ರ ಶೆಟ್ಟಿ ಕೊಳ್ನಾಡು ಮಾತನಾಡಿ, ಬೆಳೆಯನ್ನು ಕಳೆದುಕೊಂಡ ರೈತರಿಗೆ ಸರ್ಕಾರ ನೆರವಿಗೆ ಬರಬೇಕು. ಎರಡು ವರ್ಷಗಳ ಕಾಲ ಕೃಷಿ ಚಟುವಟಿಕೆ ನಡೆಸುವುದಕ್ಕೆ ಅಗತ್ಯ ನೆರವು ನೀಡುವ ಕಾರ್ಯವಾಗಬೇಕು ಎಂದು ತಿಳಿಸಿದರು.

ರೈತ ಸಂಘದ ವಿಟ್ಲ ಕಾರ್ಯದರ್ಶಿ ಸುದೇಶ್ ಭಂಡಾರಿ, ರೈತ ಮುಖಂಡರಾದ ರಾಜೀವ ಗೌಡ, ಅಣ್ಣು ಗೌಡ ಮಂಜಲಾಡಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net