ಜಿಲ್ಲೆ

ತೆರವಾಗದ ಅಣೆಕಟ್ಟು ನಿಲ್ಲದ ಬಿಕ್ಕಟ್ಟು !: ಪಟ್ಟೆಯ ಕೃತಕ ನೆರೆಗೆ ಇಲ್ಲ ಮುಕ್ತಿ : ಕಾಲುಸೇತುವೆ ಸಂಪರ್ಕ ಕಡಿತದ ಭೀತಿ

ಸೌಮ್ಯ ಆರ್

ಶಶಿ ಈಶ್ವರಮಂಗಲ

ಮಳೆಗಾಲ ಆರಂಭಕ್ಕೆ ವಾರಗಳಷ್ಟೇ ಬಾಕಿ ಇದ್ದು, ಆದರೆ ಬಡಗನ್ನೂರು ಗ್ರಾಮದ ಪಟ್ಟೆಯಲ್ಲಿರುವ ಕಿಂಡಿ ಅಣೆಕಟ್ಟಿನ ತೆರವಿಗೆ ಅಧಿಕಾರಿಗಳು, ಸ್ಥಳೀಯಾಡಳಿತ ಇನ್ನೂ ಮುಂದಾಗಿಲ್ಲ. ಜನರಿಗೆ ಈಗಾಗಲೇ ಇದು ಮಾರಕವಾಗಿ ಪರಿಣಮಿಸಿದ್ದು, ನೀರಿನ ಹರಿವು ಹೆಚ್ಚಳವಾದಾಗ ಇದುವೇ ಬಹು ದೊಡ್ಡ ಸಮಸ್ಯೆಯಾಗಲಿದೆ.

ಪಟ್ಟೆ-ಈಶ್ವರಮಂಗಲ ರಸ್ತೆಯ ಪಟ್ಟೆ ಸಮೀಪ ಈ ನಿರುಪಯುಕ್ತ ಕಿಂಡಿ ಅಣೆಕಟ್ಟು ಕಳೆದ ವರ್ಷಗಳಿಂದ ನಿರುಪಯುಕ್ತ ಸ್ಥಿತಿಯಲ್ಲಿ ಉಳಿದುಕೊಂಡಿದ್ದು, ಪ್ರತಿ ಮಳೆಗಾಲದಲ್ಲೂ ಈ ಕಿಂಡಿ ಅಣೆಕಟ್ಟಿನ ತೊಂದರೆ ಎದುರಾಗುವುದು ಮಾಮೂಲಾಗಿದೆ. ಇದನ್ನು ತೆರವುಗೊಳಿಸಲು ನೀಡಿದ ಮನವಿಗಳೆಲ್ಲವೂ ವ್ಯರ್ಥವಾಗಿವೆ.

ಪಟ್ಟೆ ಭಾಗದ ರೈತರ ಅನುಕೂಲಕ್ಕಾಗಿ ಮೂರು ದಶಕಗಳ ಹಿಂದೆ ಸೀರೆಹೊಳೆಗೆ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿತ್ತು. ಕಳೆದ ಹಲವು ವರ್ಷಗಳಿಂದ ನಿರ್ವಹಣೆ ಇಲ್ಲದೆ ಪಾಳುಬಿದ್ದಿದೆ. ಕಿಂಡಿ ಅಣೆಕಟ್ಟಿನ ಮಧ್ಯಭಾಗದ ಆಧಾರ ಸ್ಥಂಭಗಳು ಮತ್ತು ಮೇಲ್ಭಾಗದ ಅವಶೇಷಗಳು ಮಾತ್ರ ಉಳಿದುಕೊಂಡಿದ್ದು, ನೀರಿನ ರಭಸ ತಡೆದುಕೊಳ್ಳುವ ಶಕ್ತಿಯೂ ಇಲ್ಲ.

 ಸಂಪರ್ಕ ಕಡಿತದ ಭೀತಿ

ನಿರುಪಯುಕ್ತ ಕಿಂಡಿ ಅಣೆಕಟ್ಟಿನ ಪಕ್ಕದಲ್ಲೇ ಹೊಳೆಯ ಬದಿಯಲ್ಲಿದ್ದ ಬೃಹತ್‌ಗಾತ್ರದ ಆಲದ ಮರವೊಂದು ಬೇರು ಸಮೇತ ಹೊಳೆಗೆ ಅಡ್ಡವಾಗಿ ಉರುಳಿ ಬಿದ್ದಿದೆ. ಮರದ ತುದಿಯ ಕೊಂಬೆಗಳನ್ನು ತೆರವುಗೊಳಿಸಲಾಗಿದ್ದರೂ ಬೃಹತ್ ಗಾತ್ರದ ಮರದ ಬುಡ ಭಾಗ ಹೊಳೆಯಲ್ಲೇ ಉಳಿದುಕೊಂಡಿದ್ದು, ನೀರಿನ ಹರಿವಿಗೆ ತೊಂದರೆಯಾಗಿದೆ. ಕೂಡಲೇ ದಿಮ್ಮಿ ತೆರವುಗೊಳಿಸದೇ ಇದ್ದಲ್ಲಿ ಮೋಡಿಕೆ-ಪಟ್ಟೆ ಸಂಪರ್ಕ ಕಡಿತವಾಗುವ ಭೀತಿ ಇದೆ. ಜತೆಗೆ ಕೃತಕ ನೆರೆ ಉಂಟಾಗುವ ಅಪಾಯವೂ ಇದೆ.

 ಮುರಿದುಹೋದ ಕಾಲುಸೇತುವೆ

ಪಟ್ಟೆ-ಮೋಡಿಕೆ ಸಂಪರ್ಕ ರಸ್ತೆಯ ಕಾಲು ಸೇತುವೆಯ ತಡೆಗೋಡೆ ಎರಡೂ ಬದಿಗಳಲ್ಲಿ ಮುರಿದು ಹೋಗಿದೆ. ಇದು ಹತ್ತಿರದ ಸಂಪರ್ಕ ದಾರಿಯಾಗಿರುವ ಕಾರಣ ಈ ಭಾಗದ ಹೆಚ್ಚಿನ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಇದೇ ಸೇತುವೆ ಬಳಸಿಕೊಳ್ಳುತ್ತಿದ್ದಾರೆ. ಮಳೆಗಾಲಕ್ಕೆ ಮೊದಲೇ ಈ ಕಾಲುಸೇತುವೆ ದುರಸ್ತಿಗೊಳಿಸಬೇಕು ಎಂದು ಈ ಭಾಗದ ಜನರು ಆಗ್ರಹಿಸಿದ್ದಾರೆ.

ಜಿಲ್ಲಾಧಿಕಾರಿ ಆದೇಶಕ್ಕಿಲ್ಲ ಮನ್ನಣೆ

ಬಡಗನ್ನೂರು ಗ್ರಾಮಸಭೆಯಲ್ಲೂ ಗ್ರಾಮಸ್ಥರು ನಿರುಪಯುಕ್ತ ಕಿಂಡಿ ಅಣೆಕಟ್ಟಿನ ತೆರವಿಗೆ ಆಗ್ರಹಿಸಿದ್ದಾರೆ. ಡಾ.ರಾಜೇಂದ್ರ ಕೆ.ವಿ ಅವರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭ ಸುಳ್ಯಪದವಿನಲ್ಲಿ ಆಯೋಜಿಸಿದ್ದ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯದಲ್ಲಿಯೂ ಗ್ರಾಮಸ್ಥರು ಈ ಕುರಿತು ಅವರಿಗೆ ಮನವಿ ಸಲ್ಲಿಸಿದ್ದರು. ಅದರಂತೆಯೆ ನಿರುಪಯುಕ್ತ ಕಿಂಡಿ ಅಣೆಕಟ್ಟು ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಸ್ಥಳದಲ್ಲೇ ಆದೇಶ ನೀಡಿದ್ದರು. ಆದರೆ ಅಧಿಕಾರಿಗಳು ಮಾತ್ರ ಜಿಲ್ಲಾಧಿಕಾರಿ ಆದೇಶಕ್ಕೆ ಮನ್ನಣೆ ನೀಡಿರಲಿಲ್ಲ.

ಪ್ರತೀ ಮಳೆಗಾಲದಲ್ಲಿ ಸಮಸ್ಯೆ ಸೃಷ್ಟಿಸುತ್ತಿರುವ ನಿರುಪಯುಕ್ತ ಕಿಂಡಿ ಅಣೆಕಟ್ಟನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಾ ಬಂದಿದ್ದರೂ ವ್ಯರ್ಥವಾಗಿದೆ. ಕಿಂಡಿ ಅಣೆಕಟ್ಟಿನ ಪಕ್ಕದಲ್ಲಿ ಬೃಹತ್ ಗಾತ್ರದ ಮರವೊಂದು ಹೊಳೆಗೆ ಅಡ್ಡವಾಗಿ ಉರುಳಿ ಬಿದ್ದಿರುವ ಪರಿಣಾಮವಾಗಿ ಮಳೆಗಾಲದಲ್ಲಿ ಕಾಲುಸೇತುವೆ ಸಂಪರ್ಕ ಕಡಿತವಾಗುವ ಸಾಧ್ಯತೆ ಇದೆ. ಅಕ್ಕಪಕ್ಕದ ಎರಡೂ ಕಡೆಗಳಲ್ಲಿ ಮಳೆನೀರಿನ ಹರಿವಿಗೆ ತಡೆಯಾದರೆ ಹೆಚ್ಚಿನ ಸಮಸ್ಯೆ ಎದುರಾಗುವ ಸಾಧ್ಯತೆಯೂ ಇದೆ. ಸಂಬಂಧಪಟ್ಟವರು ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು. ಲಿಂಗಪ್ಪ ಗೌಡ ಮೋಡಿಕೆ, ಬಡಗನ್ನೂರು ಗ್ರಾ.ಪಂ.ಸದಸ್ಯ
  • ಕೃಷಿಕರಿಗೆ ಮಾರಕವಾಗುತ್ತಿದೆ ಪಟ್ಟೆ ಕಿಂಡಿ ಅಣೆಕಟ್ಟು
  • ಗ್ರಾಮಸ್ಥರಿಂದ ಸಾಲುಸಾಲು ಮನವಿ, ಎಲ್ಲವೂ ವ್ಯರ್ಥ
  • ದಿಮ್ಮಿ ಮುರಿದು ನೀರಿನ ಹರಿವಿಗೆ  ಅಡ್ಡಿ