ರಾಯಚೂರು: ವ್ಯವಸ್ಥೆ ಸರಿ ಇರಿಸಲೆಂದೇ ಸರ್ಕಾರ ಹೊರಡಿಸುವ ಆದೇಶಗಳಲ್ಲಿನ ನಿಯಮಗಳನ್ನು ರೂಪಿಸುವ, ಜನರು ನಿಯಮಗಳನ್ನು ಪಾಲಿಸುವಂತೆ ಮಾಡುವ ಅಧಿಕಾರಿಗಳೇ ಅವುಗಳನ್ನು ಮೀರಿದಾಗ ಜನರೂ ಆ ನಿಯಮಗಳನ್ನು ಸರಿಯಾಗಿ ಪಾಲಿಸುವುದಿಲ್ಲ. ಅಂಥದ್ದೇ ಒಂದು ಪ್ರಕರಣ ಇಲ್ಲಿ ನಡೆದಿದ್ದು, ಸರ್ಕಾರ ಏನು ಮಾಡಬಾರದು ಎಂದು ಹೇಳಿದೆಯೋ ಅದನ್ನು ಸರ್ಕಾರಿ ಅಧಿಕಾರಿಯೇ ಮಾಡಿದ್ದು, ಇದೀಗ ಅವರೆಡೆಗೆ ಎಲ್ಲರೂ ಬೊಟ್ಟು ಮಾಡಿ ತೋರಿಸುವಂತಾಗಿದೆ.
ರಾಯಚೂರಿನ ನಗರಸಭೆ ಆಯುಕ್ತ ವೆಂಟೇಶ್ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ. ಕರೊನಾ ನಿಯಂತ್ರಣಕ್ಕಾಗಿ ವಿಧಿಸಿರುವ ನಿಯಮಗಳನ್ನು ಮೀರಿ ಜನರು ಜಮಾಯಿಸಿದ್ದು, ಆ ಗುಂಪಲ್ಲಿ ಅಧಿಕಾರಿ ಎಂಬುದನ್ನೂ ಮರೆತು ತಾವೂ ಸೇರಿಕೊಂಡಿದ್ದಾರೆ. ರಾಯಚೂರು ನಗರದ ಕಂದಗಡ್ಡೆಯ ಮಾರಮ್ಮ ದೇವಸ್ಥಾನ ಬಳಿ ಈ ಘಟನೆ ನಡೆದಿದೆ.
ಕಾರ ಹುಣ್ಣಿಮೆ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದ ಸಾರ್ವಜನಿಕರು, ಕರೊನಾ ತೊಲಗಲಿ ಎಂದು ದೇವಾಲಯ ಮುಂದೆ ಪೂಜೆ ಸಲ್ಲಿಸುತ್ತಿದ್ದರು. ಈ ಸಂದರ್ಭದಲ್ಲಿ ಜನರು ದೈಹಿಕ ಅಂತರ ಪಾಲನೆ ಮಾಡದಿರುವುದು ಸೇರಿ ಇತರ ಕರೊನಾ ನಿಯಮಗಳನ್ನು ಪಾಲಿಸಿಲ್ಲ.
ಆ ಜನಜಂಗುಳಿಯಲ್ಲಿ ನಗರಸಭೆ ಆಯುಕ್ತ ವೆಂಕಟೇಶ ಸಹ ಜವಾಬ್ದಾರಿ ಮರೆತು ಜನರ ಜೊತೆ ಸೇರಿ ಪೂಜೆ ಸಲ್ಲಿಸಿದ್ದಾರೆ. ದೇವಾಲಯ ತೆರೆಯಲು ಅವಕಾಶ ಇಲ್ಲದ್ದರಿಂದ ದೇವಸ್ಥಾನದ ಎದುರು ರಸ್ತೆಬದಿಯಲ್ಲೇ ಭಕ್ತರ ನೂಕುನುಗ್ಗಲು ಉಂಟಾಗಿತ್ತು.
ಈ ಸಂದರ್ಭದಲ್ಲಿ ಮಹಿಳೆಯರು, ಮಕ್ಕಳು ಸೇರಿ ನೂರಾರು ಜನರು ಜಮಾಯಿಸಿದ್ದು, ದೇವಸ್ಥಾನದ ಗೇಟ್ ಮುಂಭಾಗದಲ್ಲೇ ಹಣ್ಣು-ಕಾಯಿ, ಅನ್ನ ನೈವೇದ್ಯ ಮುಂತಾದವು ನಡೆದವು. ಈ ವೇಳೆ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡದೆ ಜನರು ಕೋವಿಡ್ ನಿಯಮವನ್ನು ಉಲ್ಲಂಘಿಸಿದ್ದರು. ಸ್ಥಳದಲ್ಲಿ ಪೊಲೀಸರಿದ್ದರೂ ಜನರು ಡೋಂಟ್ ಕೇರ್ ಎಂಬಂತೆ ವರ್ತಿಸಿದ್ದಾರೆ.