ಕಲಬುರಗಿ: ಸಾರ್ವಜನಿಕರು ಯಾರಾದರೂ ಕೋವಿಡ್ ನಿಯಮ ಪಾಲಿಸಲಿಲ್ಲ ಎಂದರೆ ಪೊಲೀಸರು ಅಡ್ಡಗಟ್ಟಿ ತಡೆದು ಖಡಕ್ ಆಗಿ ಗದರುವ ಜತೆಗೆ ದಂಡವನ್ನೂ ವಸೂಲಿ ಮಾಡುತ್ತಾರೆ. ಆದರೆ ಇಲ್ಲೊಂದು ಕಡೆ ಪೊಲೀಸರ ಸಮ್ಮುಖದಲ್ಲೇ ದಂಡಿಯಾಗಿ ಕೋವಿಡ್ ನಿಯಮ ಉಲ್ಲಂಘನೆಯಾಗಿದ್ದು, ಇದಕ್ಕೆಲ್ಲ ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರ ವರ್ಗಾವಣೆ ಖುಷಿಯೇ ಕಾರಣವಾಗಿದೆ.
ಕಲಬುರಗಿಯ ಬ್ರಹ್ಮಪುರ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಇನ್ಸ್ಪೆಕ್ಟರ್ ಕಪಿಲ್ದೇವ್ ಎಂಬವರು ಬೀದರ್ನ ನ್ಯೂಟೌನ್ ಠಾಣೆಗೆ ವರ್ಗಾವಣೆಗೊಂಡಿದ್ದು, ಅವರನ್ನು ಬೀಳ್ಕೊಡುವಾಗ 'ಬೌಂಡರಿ' ಮೀರಿ ಸಂಭ್ರಮಿಸಿರುವ ಅಭಿಮಾನಿಗಳು-ಸಹೋದ್ಯೋಗಿಗಳು ದೈಹಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು ಮುಂತಾದ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ.
ವರ್ಗಾವಣೆ ನೆಪದಲ್ಲಿ ಕಲಬುರಗಿಯ ಯಾತ್ರಿ ನಿವಾಸದಲ್ಲಿ ಕಪಿಲ್ದೇವ್ಗೆ ಭರ್ಜರಿ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕಲಬುರಗಿಯ ವಿವಿಧ ಸಂಘಟನೆಗಳ ಅಭಿಮಾನಿಗಳು ಇನ್ಸ್ಪೆಕ್ಟರ್ ಮೇಲೆ ಹೂಗಳ ಸುರಿಮಳೆಗರೆದಿದ್ದಲ್ಲದೆ, ಅವರನ್ನು ಹೊತ್ತುಕೊಂಡು ಗುಂಪಾಗಿ ಕುಣಿದಿದ್ದಾರೆ. ಅವರ ಸಂಭ್ರಮಾಚರಣೆಯ ವಿಡಿಯೋ ವೈರಲ್ ಆಗಲಾರಂಭಿಸಿದೆ. ಕರೊನಾ ನಿಯಮ ಪಾಲಿಸಬೇಕಾದ ಹಾಗೂ ಪಾಲಿಸುವಂತೆ ನೋಡಿಕೊಳ್ಳಬೇಕಾದ ಪೊಲೀಸರ ಸಮ್ಮುಖದಲ್ಲೇ ಹೀಗೆ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಆಗಿರುವ ಕುರಿತು ಈಗ ಸಾರ್ವಜನಿಕರಿಂದ ತೀವ್ರ ಅಸಮಾಧಾನ ಕೇಳಿಬರುತ್ತಿದೆ.