ಜಿಲ್ಲೆ

ಮಗಳನ್ನು ಅಮೆರಿಕಕ್ಕೆ ಕಳಿಸಿ ಮರಳುತ್ತಿದ್ದ ದಂಪತಿ ಅಪಘಾತಕ್ಕೀಡಾಗಿ ಸ್ಥಳದಲ್ಲೇ ಸಾವು!

ಭರಮಸಾಗರ: ಪುತ್ರಿಯನ್ನು ಅಮೆರಿಕಕ್ಕೆ ಕಳುಹಿಸಿ ಮರಳುತ್ತಿದ್ದ ದಂಪತಿ, ಮಾರ್ಗಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಕಸವನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಇಂದು ಈ ಭೀಕರ ಅಪಘಾತ ಸಂಭವಿಸಿದೆ.

ಈ ಅಪಘಾತದದಲ್ಲಿ ದಾವಣಗೆರೆಯ ನಿವೃತ್ತ ಅಬಕಾರಿ ಅಧಿಕಾರಿ ಜಯರಾಂ ನಾಯ್ಕ್ (73), ಇವರ ಪತ್ನಿ ಹೇಮಾವತಿಬಾಯಿ (65) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇವರಿಗೆ ಇಬ್ಬರು ಪುತ್ರಿಯರಿದ್ದು, ಆ ಪೈಕಿ ಮೊದಲನೆಯವಳು ಬೆಂಗಳೂರಿನಲ್ಲಿ ವೈದ್ಯೆಯಾಗಿದ್ದು, ಎರಡನೆಯವಳನ್ನು ಅಮೆರಿಕಕ್ಕೆ ಕಳುಹಿಸಿದ್ದರು.

ಪುತ್ರಿಯನ್ನು ಬೆಂಗಳೂರಿನಿಂದ ಅಮೆರಿಕಕ್ಕೆ ಕಳುಹಿಸಿ ದಾವಣಗೆರೆಗೆ ಕಾರಿನಲ್ಲಿ ಮರಳುತ್ತಿದ್ದಾಗ ಮುಂದೆ ಹೋಗುತ್ತಿದ್ದ ಲಾರಿಯೊಂದಕ್ಕೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮವಾಗಿ ಕಾರು ನುಜ್ಜುಗುಜ್ಜಾಗಿದ್ದು, ಪತಿ-ಪತ್ನಿ ಇಬ್ಬರೂ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಭರಮಸಾಗರ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಉಂಟಾಗಿದ್ದು, ಪ್ರಕರಣ ದಾಖಲಾಗಿದೆ.