ಜಿಲ್ಲೆ

ಮದ್ಯಪ್ರಿಯರಿಗೆ ಶಾಕಿಂಗ್​ ನ್ಯೂಸ್​: ಕುಡುಕರ ಆಸೆ ಈಡೇರಿಸಿ ಜೇಬಿಗೆ ಕತ್ತರಿ ಹಾಕಿದ ಸರ್ಕಾರ

ಬೆಂಗಳೂರು: ಕರೊನಾ ಲಾಕ್​ಡೌನ್​ನಿಂದದಾಗಿ ಬರೋಬ್ಬರಿ ಒಂದೂವರೆ ತಿಂಗಳು ಮದ್ಯವಿಲ್ಲದೇ ಕೆಂಗೆಟ್ಟಿದ್ದ ಮದ್ಯ ಪ್ರಿಯರು ಕೊನೆಗೂ ಕೇಂದ್ರ ಸರ್ಕಾರದ ನಿರ್ಧಾರದಿಂದ ನಿರಾಳರಾಗಿದ್ದಾರೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಮದ್ಯವ್ಯಸನಿಗಳಿಗೆ ಶಾಕ್​ ನೀಡಿದೆ.

ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕರೊನಾ ವಿಶೇಷ ಪ್ಯಾಕೇಜ್​ ಘೋಷಿಸಿದ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅದೇ ವೇಳೆ ಅಬಕಾರಿ ಸುಂಕ ಹೆಚ್ಚಳ ಮಾಡುವ ಮೂಲಕ ಎಣ್ಣೆ ಪ್ರಿಯರಿಗೆ ಆಘಾತ ನೀಡಿದರು.

ಕಳೆದ ಆಯವ್ಯಯದಲ್ಲಿ ಅಬಕಾರಿ ಸುಂಕವನ್ನು ಶೇ. 6 ರಷ್ಟು ಹೆಚ್ಚಿಸಲಾಗಿತ್ತು. ಇದೀಗ ಮತ್ತೆ ಶೇ.11 ರಷ್ಟು ಹೆಚ್ಚಳ ಮಾಡಿದ್ದು, ಒಟ್ಟು ಅಬಕಾರಿ ಸುಂಕ 17ಕ್ಕೇರಿದೆ. ಇದರಿಂದ ಕುಡುಕರ ಜೇಬಿಗೆ ಮತ್ತಷ್ಟು ಹೊರೆಯಾಗುವ ಸಾಧ್ಯತೆ ಇದ್ದು, ಸರ್ಕಾರದ ಖಜಾನೆ ತುಂಬುವ ನಿರೀಕ್ಷೆ ಇದೆ.

ಇನ್ನು ಕರೊನಾ ಲಾಕ್​ಡೌನ್​ನಿಂದ ಕಳೆದ ಒಂದೂವರೆ ತಿಂಗಳಿಂದ ದೂರವಾಗಿದ್ದ ಮದ್ಯ ಇದೀಗ ಮತ್ತೆ ಕುಡುಕರ ಬಳಿ ಸೇರಿದೆ. ಅಂದರೆ ಕಳೆದ ಸೋಮವಾರದಿಂದ ಕರೊನಾ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕೆಲವು ಷರತ್ತುಗಳನ್ನು ವಿಧಿಸಿ ಮದ್ಯ ಮಾರಾಟಕ್ಕೆ ಸರ್ಕಾರ ಅನುಮತಿ ಮಾಡಿಕೊಟ್ಟಿದೆ. ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ಭರ್ಜರಿ ಮದ್ಯ ಮಾರಾಟವಾಗಿದೆ. ಅಲ್ಲದೆ, ಕುಡುಕರ ಉಪಟಳವೂ ಕೂಡ ಅಲ್ಲಲ್ಲಿ ವರದಿಯಾಗಿವೆ.