ಜಿಲ್ಲೆ

ಲಾಡ್ಜ್​ನಲ್ಲಿ ಕುಕ್ಕರ್​ ಸ್ಫೋಟ; 8 ಮಂದಿಗೆ ಗಾಯ, ಇಬ್ಬರು ಗಂಭೀರ

ಬೆಳಗಾವಿ: ಬೆಳಗಾವಿ ಜಿಲ್ಲೆಯ ಸುಕ್ಷೇತ್ರ ಸವದತ್ತಿ ಯಲ್ಲಮ್ಮನ ದೇವಸ್ಥಾನದ ಕೂಗಳತೆ ದೂರದಲ್ಲಿರುವ ಲಾಡ್ಜ್​ ಒಂದರಲ್ಲಿ ಕುಕ್ಕರ್​ ಸ್ಪೋಟಗೊಂಡ ಪರಿಣಾಮ 8 ಭಕ್ತರು ಗಾಯಗೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಗಾಯಾಳುಗಳನ್ನು ಬೆಂಗಳೂರಿನ ರಾಮಸ್ವಾಮಿ ಚಿಕ್ಕಪುಳ್ಳಪ್ಪ (42), ವೆಂಕಟೇಶ ಕೃಷ್ಣಪ್ಪ (53), ರತ್ನಮ್ಮ ಗೋವಿಂದಪ್ಪ (48), ಗಣೇಶ ರಮೇಶಪ್ಪ ಕರೂರ (30), ಗದಗ ಜಿಲ್ಲೆಯ ಪ್ರಸಾದ ಜಾಧವ (34) ಮತ್ತು ಯಾದಗಿರಿ ಜಿಲ್ಲೆಯ ಬಸಮ್ಮ ಬಿರಾದಾರ (56), ಸುಮಿತ್ರಾ ಯಕ್ಕಹಳ್ಳಿ (42) ಹಾಗೂ ಸಿದ್ದಮ್ಮ ಶೆಟಗೇರಿ ಎಂದು ಗುರುತಿಸಲಾಗಿದ್ದು, ಇವರನ್ನು ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ ಇಬ್ಬರು ಮಹಿಳೆಯರ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗುತ್ತಿದೆ.

ಗಾಯಾಳುಗಳು ಕುಟುಂಬ ಸಮೇತರಾಗಿ ಸವದತ್ತಿ ಯಲ್ಲಮ್ಮದೇವಿ ದರ್ಶನಕ್ಕೆ ಬಂದಿದ್ದರು. ಅವರಲ್ಲಿ ಬೆಂಗಳೂರಿನಿಂದ 5 ಜನ, ಯಾದಗಿರಿ ಜಿಲ್ಲೆಯಿಂದ 3 ಭಕ್ತರು ಬಂದಿದ್ದರು. ಹೀಗಾಗಿ ಹೋಳಿಗೆ ಮಾಡಲು ಕುಕ್ಕರ್​ನಲ್ಲಿ ಬೇಳೆ ಬೇಯಿಸಲು ಗ್ಯಾಸ್ ಹೊತ್ತಿಸಿದ್ದರು. ಈ ವೇಳೆ ಕುಕ್ಕರ್ ಎರಡು ಸೀಟಿ ಹೊಡೆದ ಬಳಿಕ ಸ್ಫೋಟಗೊಂಡಿದ್ದು, ಕ್ಷಣಾರ್ಧದಲ್ಲೇ ಬೆಂಕಿ ಹೊತ್ತಿಕೊಂಡಿದೆ. ಕೋಣೆಯಲ್ಲಿದ್ದ ಪ್ಲಾಸ್ಟಿಕ್ ವಸ್ತುಗಳು, ಬಟ್ಟೆ, ಆಹಾರ ಸಾಮಗ್ರಿಗಳು ಬೆಂಕಿಗಾಹುತಿಯಾಗಿದ್ದು, ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಹೋಟೆಲ್​ನಲ್ಲಿ ಕುಕ್ಕರ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಬಂದ ಸ್ಥಳಕ್ಕೆ ಸವದತ್ತಿ ಪಟ್ಟಣ ಠಾಣೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು, ಮೇಲ್ನೋಟಕ್ಕೆ ಹೋಳಿಗೆ ಮಾಡಲು ಕುಕ್ಕರ್​​ನಲ್ಲಿ ಬೇಳೆ ಹಾಕಿದ್ದ ವೇಳೆ, ಕುಕ್ಕರ್​ಗೆ ನೀರು ಹಾಕುವುದನ್ನ ಮರೆತಿದ್ದರಿಂದ ಬ್ಲಾಸ್ಟ್ ಆಗಿರುವ ಬಗ್ಗೆ ಮಾಹಿತಿ ದೊರೆತಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.