ಜಿಲ್ಲೆ

ಯಾರೂ ಇಲ್ಲದಾಗ ಮನೆಗೆ ಬೆಂಕಿ ಇಟ್ಟ ದುಷ್ಕರ್ಮಿಗಳು; 'ಕಿಡಿ ಕಾರಿತು' ಜಮೀನು ವಿವಾದ

ಬೆಂಗಳೂರು: ಜಮೀನು ವಿವಾದ ಕಾವೇರಿದ್ದು ಮನೆಗೆ ಬೆಂಕಿ ಇಡುವಲ್ಲಿಯವರೆಗೂ ತಲುಪಿದ್ದು, ಮನೆಯಲ್ಲಿರುವ ಹಲವಾರು ಸಾಮಾನುಗಳು ಬೆಂಕಿಯಿಂದಾಗಿ ನಾಶವಾಗಿವೆ. ಜಮೀನು ವಿವಾದ ನ್ಯಾಯಾಲಯದಲ್ಲಿದ್ದರೂ ತಾಳ್ಮೆಗೆಟ್ಟ ಕಿಡಿಗೇಡಿಗಳು ಮನೆಗೆ ಕಿಡಿ ಸೋಕಿಸಿ ಬೆಂಕಿ ಹಚ್ಚಿದ್ದಾರೆ.

ಬೆಂಗಳೂರು ಹೊರವಲಯದ ದೇವನಹಳ್ಳಿ ತಾಲೂಕಿನ ಕೊಡಗುರ್ಕಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪೆಮ್ಮರೆಡ್ಡಿ ಎಂಬುವರಿಗೆ ಸೇರಿದ ಮನೆಗೆ ಡಿಜೆಲ್ ಸುರಿದ ದುರುಳರು ಬೆಂಕಿ ಹಚ್ಚಿದ್ದಾರೆ. ಬೆಂಕಿ ಮನೆಗೆ ಆವರಿಸಿದ್ದರಿಂದ ಅಲ್ಲಿದ್ದ ಪಾತ್ರೆ-ಸಾಮಾನುಗಳು ಸೇರಿ ಹಲವಾರು ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.

ಪೆಮ್ಮರೆಡ್ಡಿ ಅವರ ತಂದೆ ಕೆ.ವೆಂಕಟಪ್ಪ ಹಾಗೂ ಮುನಿವೆಂಕಟಪ್ಪ ಎಂಬುವವರಿಗೆ ಸೇರಿದ ಜಂಟಿ 4 ಎಕರೆ 34 ಗುಂಟೆ ಜಮೀನಲ್ಲಿ 2 ಎಕರೆ 17 ಗುಂಟೆಯನ್ನು ಮುನಿವೆಂಕಟಪ್ಪ ಬೇರೆಯವರಿಗೆ ಮಾರಾಟ ಮಾಡಿದ್ದರು. ಉಳಿದ 2 ಎಕರೆ 17 ಗುಂಟೆ ಜಮೀನನ್ನು ಪೆಮ್ಮರೆಡ್ಡಿ ಖರೀದಿಸಿದ್ದರು. ಆದರೆ ಈ ಜಮೀನು ಸಂಬಂಧ ವಿವಾದವಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ.

ಇನ್ನು ಪೆಮ್ಮರೆಡ್ಡಿ ಅವರ ಮನೆಗೆ ಮುನಿವೆಂಕಟಪ್ಪ ಕಡೆಯವರಾದ ರಘು, ಕಿರಣ್, ವಸಂತ್ ಎಂಬುವವರು ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದ್ದು, ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ