ಜಿಲ್ಲೆ

ಸಮನ್ಸ್ ನೀಡಲು ಬಂದಿದ್ದ ಪೊಲೀಸ್​, ಅತ್ಯಾಚಾರ ಮಾಡಿದ, ಗರ್ಭಪಾತವನ್ನೂ ಮಾಡಿಸಿದ; ವಿಡಿಯೋ ವೈರಲ್​...

ಕಡಬ: ಪೊಲೀಸ್​ ಸಿಬ್ಬಂದಿಯೇ ಅಪ್ರಾಪ್ತ ವಯಸ್ಸಿನವಳ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ, ಬಳಿಕ ತನ್ನ ಉಸ್ತುವಾರಿಯಲ್ಲೇ ಗರ್ಭಪಾತ ಮಾಡಿಸಿ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದು ಬೆಳಕಿಗೆ ಬಂದಿದೆ. ಈ ಕುರಿತ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದಕ್ಷಿಣ ಕನ್ನಡ ಜಿಲ್ಲೆ ಕಡಬ ಪೊಲೀಸ್ ಠಾಣೆಯ ಕಾನ್​ಸ್ಟೆಬಲ್ ಶಿವರಾಜ್ ಎಂಬಾತನ ವಿರುದ್ಧ ಈ ಆರೋಪ ಕೇಳಿಬಂದಿದ್ದು, ಸಂತ್ರಸ್ತೆಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ವಿಚಾರ ಪುತ್ತೂರು ಎಎಸ್‌ಪಿ ಗಾನ ಪಿ. ಕುಮಾರ್ ಅವರ ಗಮನಕ್ಕೂ ಬಂದಿದ್ದು, ಶನಿವಾರ ಅವರು ಕಡಬ ಠಾಣೆಗೆ ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗಿದೆ.

ಆರು ತಿಂಗಳ ಹಿಂದೆ ಪ್ರಕರಣವೊಂದರ ಸಂಬಂಧ ನಮ್ಮ ಮನೆಗೆ ಸಮನ್ಸ್ ನೀಡಲು ಬಂದಿದ್ದ ಶಿವರಾಜ್​, ಮಗಳನ್ನು ಪರಿಚಯ ಮಾಡಿಕೊಂಡಿದ್ದ. ನಂತರ ಆ ಪ್ರಕರಣ ಮುಗಿದು ಹೋಗಿದ್ದರೂ ನಾನಾ ಕಾರಣ ಹೇಳಿಕೊಂಡು ಮನೆಗೆ ಬಂದು ಹೋಗುತ್ತಿದ್ದ. ಕ್ರಮೇಣ ಮದುವೆ ಆಗುವುದಾಗಿ ನಂಬಿಸಿ ಆಕೆಯೊಂದಿಗೆ ಲೈಂಗಿಕ ಸಂಪರ್ಕ ನಡೆಸಿದ್ದ. ಗರ್ಭಿಣಿಯಾದ ಕುರಿತು ಮಗಳು ನಮ್ಮ ಬಳಿ ತಿಳಿಸಿದ್ದು, ನಂತರ ಆ ಕುರಿತು ಶಿವರಾಜ್​ನನ್ನು ಪ್ರಶ್ನಿಸಿದಾಗ, ಗರ್ಭಪಾತ ಮಾಡಿಸಿಕೊಳ್ಳಲು ಹಣ ನೀಡುವುದಾಗಿ ಬೆದರಿಕೆಯೊಡ್ಡಿದ್ದ ಎಂದು ಸಂತ್ರಸ್ತೆಯ ತಂದೆ ದೂರಿನಲ್ಲಿ ತಿಳಿಸಿದ್ದಾರೆ.

ಶಿವರಾಜ್​ ಅತ್ಯಾಚಾರ ಮಾಡಿರುವ ವಿಷಯ ತನ್ನ ಪ್ರಭಾವ ಬಳಸಿ ಮುಚ್ಚಿಡಲು ಪ್ರಯತ್ನಿಸಿದ್ದರೂ, ಅದು ಸೋಷಿಯಲ್ ಮೀಡಿಯಾ ಮೂಲಕ ವೈರಲ್​ ಆಗಿತ್ತು. ಬಳಿಕ ಪ್ರಕರಣ ಹಾಸ್ಯಾಸ್ಪದವಾಗಿ ಹಲವು ರೂಪ ಪಡೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ವರದಿ ಮಾಡದಂತೆ ಪತ್ರಕರ್ತರಿಗೆ ಪೊಲೀಸರು ದುಂಬಾಲು ಬೀಳುತ್ತಿರುವ ವಿಡಿಯೋ ಸಹ ಜಾಲತಾಣದಲ್ಲಿ ವೈರಲ್ ಆಗಿದೆ. ಆರೋಪಿಯನ್ನು ಅಮಾನತುಗೊಳಿಸಿ ಕ್ರಮಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಹೇಳಿಕೊಂಡಿದ್ದಾರೆ.

ಇಲಾಖೆಯ ಸಿಬ್ಬಂದಿ ಅತ್ಯಾಚಾರ ಮಾಡಿ, ಆಕೆಯನ್ನು ಗರ್ಭವತಿಯನ್ನಾಗಿಸಿ ಬಳಿಕ ಅಬಾರ್ಷನ್ ಮಾಡಿಸಿದ್ದಾನೆ ಎನ್ನುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಗಮನಕ್ಕೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತೆ ಅಥವಾ ಸಾರ್ವಜನಿಕರು ಹೆಸರು ಉಲ್ಲೇಖಿಸಿ ದೂರು ನೀಡಿದರೆ ಆರೋಪಿ ವಿರುದ್ಧ ಕ್ರಮ ಜರುಗಿಸಲಾಗುವುದು.| ಗಾನ ಪಿ. ಕುಮಾರ್ ಪುತ್ತೂರು ಎಎಸ್‌ಪಿ