ಕಟೀಲು: ಎಕ್ಕಾರು ಕೊಡಮಣಿತ್ತಾಯ ಕ್ಷೇತ್ರದಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದವರೆಗೆ ಪಾದಯಾತ್ರೆ ಹಾಗೂ ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ದೇವಳಗಳಲ್ಲಿ ಪೂಜಾ ಬೆಲೆ ಏರಿಕೆಗೆ ಕಾರಣಕರ್ತರಲ್ಲ ಎಂದು ಸತ್ಯ ಪ್ರಮಾಣ ಸೆ.26ರಂದು ಸಂಜೆ ನಡೆಯಲಿದೆ. ಇದು ಸುಳ್ಳೆಂದು ಸಾಬೀತು ಪಡಿಸಲಿಚ್ಛಿಸುವವರು ಕೂಡಾ ಶ್ರೀಕ್ಷೇತ್ರಕ್ಕೆ ಬಂದು ಪ್ರಮಾಣ ಮಾಡಬಹುದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ತಿಳಿಸಿದರು.
ಹಳೆಯಂಗಡಿಯ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸಮಾನ ಮನಸ್ಕ ಹಿಂದು ಧರ್ಮೀಯರ ಜತೆಗೆ ಪಾದಯಾತ್ರೆ ನಡೆಯಲಿದೆ. ಬಿಜೆಪಿ ಧರ್ಮ ರಾಜಕೀಯ ಮಾಡುವುದನ್ನು ಬಿಟ್ಟು ರಾಜ್ಯದಲ್ಲಿ ಅಭಿವೃದ್ಧಿ ಪೂರಕ ರಾಜಕಾರಣ ನಡೆಸಬೇಕು. ಕಿನ್ನಿಗೋಳಿ, ಬಜಪೆ ಪಪಂ ಚುನಾವಣೆ ಬರುವ ಸಮಯ ಧರ್ಮದ ಹೆಸರಿನಲ್ಲಿ ಸುಳ್ಳು ರಾಜಕೀಯ ಮಾಡಿ ತನ್ನ ಬೇಳೆ ಬೇಯಿಸಲು ಬಿಜೆಪಿ ಹೊರಟಿದೆ ಎಂದರು.
ದೂರು ದಾಖಲು: ಬಿಜೆಪಿ ಮುಖವಾಣಿ ಅಸ್ತ್ರ ಜಾಲತಾಣದ ಮೂಲಕ ಕಟೀಲು ಕ್ಷೇತ್ರದಲ್ಲಿ ಪೂಜಾ ದರ ಪಟ್ಟಿ ಏರಿಸಿರುವುದು ಸಿದ್ದರಾಮಯ್ಯ ಸರ್ಕಾರ ಎಂಬ ಸುಳ್ಳು ವಿಷಯ ವೈರಲ್ ಮಾಡಿದ ಬಗ್ಗೆ ಮಂಗಳೂರು ಮತ್ತು ಮೂಡುಬಿದಿರೆಯಲ್ಲಿ ದೂರು ದಾಖಲಿಸಲಾಗಿದೆ ಎಂದರು.
ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಜೈನ್ ಶಿರ್ತಾಡಿ, ಕೆಪಿಸಿಸಿ ಕೋ-ಆರ್ಡಿನೇಟರ್ ವಸಂತ್ ಬೆರ್ನಾಡ್, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಮೂಡುಬಿದಿರೆ ಪುರಸಭೆಯ ಸದಸ್ಯ ಪುರಂದರ ದೇವಾಡಿಗ, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಂಜುನಾಥ ಕಂಬಾರ, ಯುವ ಕಾಂಗ್ರೆಸ್ ನಾಯಕ ರಕ್ಷಿತ್ ಕೊಳಚಿ ಕಂಬಳ ಉಪಸ್ಥಿತರಿದ್ದರು.