ಜಾತ್ರೋತ್ಸವದ ಬಳಿಕ ಸುತ್ತುಪೌಳಿ ಕಾಮಗಾರಿ ಆರಂಭ : ಕುಕ್ಕೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಮಾಹಿತಿ

Published on

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜಾತ್ರೋತ್ಸವದ ಬಳಿಕ ಸುತ್ತುಪೌಳಿ ಕಾಮಗಾರಿ ಪ್ರಾರಂಭವಾಗಲಿದೆ. ಬಳಿಕ ಒಂದು ವರ್ಷದ ಒಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಶ್ರೀ ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದೇವಸ್ಥಾನಕ್ಕೆ ಸಂಬಂಧಿಸಿ ಸುತ್ತು ಪೌಳಿ ಕೆಲಸ ಮಹತ್ವಪೂರ್ಣ. ಲೋಕೋಪಯೋಗಿ ಇಲಾಖೆ ಯೋಜನೆ ರೂಪಿಸುತ್ತಿದ್ದು, ಪೊಳಲಿ, ಕಾಪು ಮಾರಿಗುಡಿ ಮತ್ತಿತರ ದೇವಸ್ಥಾನದ ಮಾದರಿ ಅಧ್ಯಯನ ಮಾಡಲಾಗಿದೆ. ಇವುಗಳ ಮಾದರಿಯಲ್ಲೇ ಪಾರಂಪರಿಕವಾಗಿ ಸುತ್ತು ಪೌಳಿ ನಿರ್ಮಿಸಲಾಗುವುದು ಎಂದರು.

ತಾಂಬೂಲ ಪ್ರಶ್ನೆಯಲ್ಲಿ ಕಂಡುಬಂದಂತೆ ಗರ್ಭ ಗುಡಿಯ ನೈರುತ್ಯ ಭಾಗದಲ್ಲಿ ಸುತ್ತು ಪೌಳಿಯ ಒಳಗಡೆ ಗಣಪತಿ ಗುಡಿಯೂ ಆಗಬೇಕಿದೆ. ಅದು ಕೂಡ ಸುತ್ತು ಪೌಳಿ ಪುನರ್ ರಚನೆ ಸಂದರ್ಭ ನಿರ್ಮಿತವಾಗಲಿದೆ. ಈ ಬಾರಿ ಜಾತ್ರೆ ಮುಗಿದ ತಕ್ಷಣ ಈ ಕಾರ್ಯ ಆರಂಭಗೊಳ್ಳಲಿದೆ ಎಂದರು.

ರಥ ಬೀದಿ ಪಕ್ಕ ಹಿಂದಿನ ಕುಮಾರ ಕೃಪಾ ಹೋಟೆಲ್ ಇದ್ದ ಜಾಗದಲ್ಲಿ 5000 ಜನರು ಏಕಕಾಲದಲ್ಲಿ ಕುಳಿತುಕೊಳ್ಳಬಹುದಾದ ಭೋಜನ ಶಾಲೆ, ಪಾಕ ಶಾಲೆ ಮಾಡಲಾಗುವುದು. ಅಂದಾಜು ನೂರು ಕೋಟಿ ರೂ. ವೆಚ್ಚ ಬೇಕಾಗಬಹುದು. ಇದಲ್ಲದೆ ಪಾರಂಪರಿಕ ರಥಬೀದಿ ನಿರ್ಮಾಣ ಮಾಡಲಾಗುವುದು. ದೇವಸ್ಥಾನದ ಮುಂಭಾಗವೂ ಪ್ರವೇಶ ದ್ವಾರ ರಚಿಸಲಾಗುವುದು ಎಂದರು.

ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಜಿತ್ ಕುಮಾರ್, ಡಾ.ರು, ಲೀಲಾಮನಮೋಹನ್, ಪವೀಣ ರೈ ಮರುವಂಜ, ಸೌಮ್ಯಾ ಭರತ್, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಸತೀಶ್ ಕೂಜುಗೋಡು, ಪವನ್ ಎಂ.ಡಿ. ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net