

ಸಂದೀಪ್ ಸಾಲ್ಯಾನ್ ಬಂಟ್ವಾಳ
ಸರ್ಕಾರದ ವಸತಿ ಯೋಜನೆ ಅನ್ವಯ ಮಂಜೂರಾದ ಮನೆ ಕೈತಪ್ಪಿರುವುದು ಒಂದೆಡೆಯಾದರೆ, ಮನೆ ನಿರ್ಮಾಣಕ್ಕೆಂದು ತಂದ ಕಲ್ಲು, ಮರಳು ರಾಶಿ ವ್ಯರ್ಥವಾಗುತ್ತಿರುವುದು ಇನ್ನೊಂದೆಡೆ. ಹೊಸ ಸೂರಿನ ಕನಸು ಹೊತ್ತು ಟಾರ್ಪಾಲು ಗುಡಿಸಲಿನಲ್ಲಿ ಜೀವನ ನಡೆಸುತ್ತಿರುವ ಕಡುಬಡಕುಟುಂಬದ ಸಂಕಷ್ಟ ಇದಾಗಿದೆ.
ಬಂಟ್ವಾಳದ ಬಡಗಬೆಳ್ಳೂರು ಗ್ರಾಮದ ವರಟೀಲು ಎಂಬಲ್ಲಿ ವಾಸವಾಗಿರುವ ದಲಿತ ಆದಿದ್ರಾವಿಡ ಸಮುದಾಯದ ಲಕ್ಷ್ಮೀ ಎಂಬುವರ ದುರಂತದ ಕತೆಯಿದು. ಕಾಲೇಜು ಹಂತದಲ್ಲಿ ಶಿಕ್ಷಣ ಪಡೆಯುತ್ತಿರುವ ಇಬ್ಬರು ಮಕ್ಕಳು, ಅನರೋಗ್ಯಕ್ಕೆ ತುತ್ತಾಗಿರುವ ವೃದ್ಧ ಪಾಲಕರ ಸಹಿತ ಐದು ಮಂದಿಯ ಕುಟುಂಬವು ಡೇರೆಯೊಳಗಿದ್ದುಕೊಂಡು ಭವಿಷ್ಯದ ಕನಸು ಕಾಣುತ್ತಿದೆ.
ಘಟನೆಯ ಹಿನ್ನೆಲೆ: ಮೂರು ವರ್ಷಗಳ ಹಿಂದೆ ಸುರಿದ ಭಾರಿ ಗಾಳಿ ಮಳೆಯ ಹೊಡೆತಕ್ಕೆ ಲಕ್ಷ್ಮೀ ಅವರ ಗುಡಿಸಲಿನ ಮನೆ ಸಂಪೂರ್ಣ ಕುಸಿದು ಬಿದ್ದಿತ್ತು. ಸಂಕಷ್ಟಕ್ಕೆ ಒಳಗಾದ ಅವರ ಕುಟುಂಬಕ್ಕೆ ಸರ್ಕಾರದ ವಸತಿ ಯೋಜನೆಯು ಕುರಿತು ಆಶಾಕಿರಣ ಮೂಡಿಸಿತ್ತು. ಅರ್ಜಿ ಸಲ್ಲಿಕೆಯಾದ ಬಳಿಕ ಮನೆ ನಿರ್ಮಾಣ ಆರಂಭಿಸುವ ಉದ್ದೇಶದಿಂದ ಗುದ್ದಲಿ ಪೂಜೆಯನ್ನೂ ನೆರವೇರಿಸಿ ಬಳಿಕ ಅನುದಾನಕ್ಕಾಗಿ ಪಂಚಾಯಿತಿಗೆ ತೆರಳಿದಾಗ ಮನೆ ನಿರ್ಮಾಣಕ್ಕಾಗಿ ಮಂಜೂರಾದ ಹಣ ವಾಪಸಾಗಿರುವುದು ಗೊತ್ತಾಗಿದೆ. ಲಕ್ಷ್ಮೀ ಅವರ ಬಂಧುವೊಬ್ಬರು ಸಂಬಂಧಿತ ಇಲಾಖೆ ಕಚೇರಿಗೆ ತೆರಳಿ ಪರಿಶೀಲಿಸಿದಾಗ ಅನುದಾನ ರದ್ದಾಗಿರುವ ಕುರಿತು ಖಾತರಿಯಾಗಿದ್ದು, ಮತ್ತೊಮ್ಮೆ ಅನುದಾನ ಮಂಜೂರಾತಿ ಸಾಧ್ಯತೆ ಕಡಿಮೆ ಎಂಬುದೂ ಗೊತ್ತಾಗಿದೆ.
ಜೋಪಡಿಯಲ್ಲಿ ನಿತ್ಯ ಬದುಕು
ಗೃಹನಿರ್ಮಾಣಕ್ಕೆ ಅನುದಾನ ರದ್ದಾದಲ್ಲಿಂದ ಲಕ್ಷ್ಮೀ ಅವರು ಪಕ್ಕದಲ್ಲೇ ಸ್ಥಳೀಯರು ಜಮೀನಿನಲ್ಲಿ ಟಾರ್ಪಾಲು ಹಾಸಿದ ಜೋಪಡಿಯಲ್ಲಿ ಜೀವನ ಕಳೆಯುತ್ತಿದ್ದಾರೆ. ಜತೆಗೆ ಲಕ್ಷ್ಮೀ ಅವರು ತಮ್ಮ ಕುಟುಂಬಕ್ಕೆ ಏಕೈಕ ಜೀವನಾಧಾರವಾಗಿದ್ದು, ಇತರ ಆದಾಯಗಳ ಮೂಲ ಯಾವುದೂ ಇಲ್ಲ. ಗುಡಿಸಲಿನ ಸುತ್ತಮುತ್ತ ವಿಷಜಂತುಗಳ ಸಂಚಾರದಿಂದ ನಿತ್ಯವೂ ಈ ಕುಟುಂಬ ಭಯದಲ್ಲೇ ದಿನಕಳೆಯುತ್ತಿದೆ. ಸರ್ಕಾರದ ನೆರವಿನ ನಂಬಿಕೆಯನ್ನು ಕುಟುಂಬ ಕಳೆದುಕೊಂಡಿದ್ದು, ದಾನಿಗಳ ಸಹಕಾರ ನಿರೀಕ್ಷಿಸಿದ್ದಾರೆ.
ನಮ್ಮ ಹಳೇ ಮನೆ ಕುಸಿದು ಬಿದ್ದ ಬಳಿಕ ಟಾರ್ಪಾಲು ಹಾಕಿದ ಜೋಪಡಿಯಲ್ಲಿ ವಾಸ ಮಾಡುತ್ತಿದ್ದೇವೆ. ಮಳೆಗಾಲದಲ್ಲಿ ನೀರೆಲ್ಲಾ ಒಳಗೆ ಹರಿದು ಬರುತ್ತದೆ. ಗುಡಿಸಲ ಜೀವನ ಅಸುರಕ್ಷಿತವಾದರೂ ಅನಿವಾರ್ಯವಾಗಿದೆ. ಸರ್ಕಾರ ಅಥವಾ ದಾನಿಗಳ ನೆರವಿನಿಂದ ಸಣ್ಣ ಮನೆ ದೊರೆತರೂ ನೆಮ್ಮದಿಯಿಂದ ಬದುಕುತ್ತೇವೆ. ಲಕ್ಷ್ಮೀ ವರಟೀಲು, ಸಂತ್ರಸ್ತೆ