ಜಿಲ್ಲೆ

ಕಲ್ಯಾಣ ಕರ್ನಾಟಕ : ಬಿಜೆಪಿ ವಿರುದ್ಧ ಟ್ವಿಟರ್ ವಾರ್​ಗೆ ಮುಂದಾದ ಕಾಂಗ್ರೆಸ್

rashmirhebbur

ಬೆಂಗಳೂರು : ಕಲ್ಯಾಣ ಕರ್ನಾಟಕಕ್ಕೆ ಯುಪಿಎ ಸರ್ಕಾರದಡಿ ಮಂಜೂರಾಗಿದ್ದ ಹಲವು ಯೋಜನೆಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಇಲ್ಲವೇ ರದ್ದುಪಡಿಸಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ದ್ರೋಹ ಎಸಗುತ್ತಿವೆ ಎಂದು ಕಾಂಗ್ರೆಸ್ ಆರೋಪಿಸಿದೆ. "ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ್ದು ಬಿಟ್ಟರೆ ಬಿಜೆಪಿ ಈ ಪ್ರದೇಶಕ್ಕೆ ಮಾಡಿದ್ದು ದ್ರೋಹದ ಮೇಲೆ ದ್ರೋಹ" ಎಂದು ಟ್ವಿಟರ್​ನಲ್ಲಿ ಬಿಜೆಪಿ ವಿರುದ್ಧ ​ಸಮರ ಸಾರಿದೆ.

ರಾಜ್ಯ ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ವಿಷಯವಾಗಿ ಹಲವು ಟ್ವೀಟ್​ಗಳ ಸರಣಿಯನ್ನು ಹರಿಬಿಟ್ಟಿದೆ. ಕಲಬುರ್ಗಿ, ಕೊಪ್ಪಳ, ರಾಯಚೂರಿನ ವಿವಿಧ ಯೋಜನೆಗಳ ವಿಚಾರವನ್ನು ತೆಗೆದು, 'ಬಿಜೆಪಿಯಿಂದ ಕತ್ತಲಿಗೆ ಕಲ್ಯಾಣ ಕರ್ನಾಟಕ' ಎಂಬ ಶೀರ್ಷಿಕೆಯನ್ನು ಹೊಂದಿದ ಪೋಸ್ಟರ್​​ಗಳನ್ನು ಪೋಸ್ಟ್​ ಮಾಡಿ ವಾಕ್​ಪ್ರಹಾರ ನಡೆಸಿದೆ.

"ಡಬಲ್ ಇಂಜಿನ್ ಸರ್ಕಾರಗಳು ಕೆಕೆಆರ್‌ಡಿಬಿ ಅನುದಾನಕ್ಕೆ ಕತ್ತರಿ ಹಾಕಿವೆ. ಬಜೆಟ್‌ನಲ್ಲೂ ಯಾವುದೇ ಯೋಜನೆಗಳಿಲ್ಲ" ಎಂದು ಟೀಕಿಸಿರುವ ಕಾಂಗ್ರೆಸ್, ಕಲ್ಬುರ್ಗಿಗೆ ಮಂಜೂರಾಗಿದ್ದ ತೊಗರಿ ತಂತ್ರಜ್ನಾನ ಪಾರ್ಕ್ ರದ್ದು, ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಕಚೇರಿ ಮತ್ತು ರಾಯಚೂರು ಐಐಟಿ ಸ್ಥಳಾಂತರ, ಕೊಪ್ಪಳ ವಿಮಾನ ನಿಲ್ದಾಣ ಯೋಜನೆ ಮುಂತಾಗಿ ಉಲ್ಲೇಖಿಸಿ, ಈ ಪ್ರದೇಶಕ್ಕೆ "ಡಬಲ್ ಸರ್ಕಾರ ಡಬಲ್ ದ್ರೋಹ" ಎಸಗುತ್ತಿದೆ ಎಂದು ಆಪಾದಿಸಿದೆ.

ಈ ಟ್ವೀಟ್​ಗಳಿಗೆ ಪ್ರತ್ಯುತ್ತರ ನೀಡಿರುವ ಕರ್ನಾಟಕ ಬಿಜೆಪಿ, "ಕಲ್ಯಾಣ ಕರ್ನಾಟಕ ಏಕೆ ಅಭಿವೃದ್ಧಿ ಕಂಡಿಲ್ಲ ಎಂಬ ಕಾಂಗ್ರೆಸ್ ಪ್ರಶ್ನೆಗೂ ಮಲ್ಲಿಕಾರ್ಜುನ ಖರ್ಗೆ ಅವರ ಸಂಪತ್ತಿನ ವೃದ್ಧಿಗೂ ಸಂಬಂಧವಿದೆ. ಖರ್ಗೆ ಆಸ್ತಿಯ ಬಗ್ಗೆ ಕಾಂಗ್ರೆಸ್ ಮೊದಲು ಪ್ರಶ್ನೆ ಮಾಡಬೇಕು. ಆಗ ಈ ಜಿಲ್ಲೆಗಳು ಹಿಂದುಳಿದಿರುವುದಕ್ಕೆ ಉತ್ತರ ಸಿಗುತ್ತದೆ" ಎಂದಿದೆ. ಜೊತೆಗೆ "ಕಲ್ಯಾಣ ಕರ್ನಾಟಕದ ನಿಜವಾದ ವೈರಿಯೇ ಕಾಂಗ್ರೆಸ್" ಎಂದು ಪ್ರತ್ಯಾರೋಪ ಮಾಡಿ ಟ್ವೀಟ್ ಮಾಡಿದೆ. (ಏಜೆನ್ಸೀಸ್)