ಆಟದ ನಡುವೆ ಪೆಟ್ಟಿಗೆ ಒಳಕ್ಕೆ ಜಿಗಿದ ಮುಗ್ಧ ಮಕ್ಕಳು... ಅಲ್ಲಿ ಕಾಯುತ್ತಿದ್ದ ಜವರಾಯ !

storage
Published on

ಬಿಕನೇರ್: ರಾಜಸ್ತಾನದ ಹಳ್ಳಿಯೊಂದರಲ್ಲಿ ಆಟದ ನಡುವೆ ಧಾನ್ಯ ಸಂಗ್ರಹಿಸಿಡುವ ಪೆಟ್ಟಿಗೆಯೊಳಗೆ ಜಿಗಿದು ಸಿಕ್ಕಿಹಾಕಿಕೊಂಡಿರುವ ಐವರು ಮಕ್ಕಳು, ಉಸಿರುಕಟ್ಟಿ ಸಾವನ್ನಪ್ಪಿರುವ ದುರಂತ ಸಂಭವಿಸಿದೆ. ಬಿಕನೇರ್ ಜಿಲ್ಲೆಯ ಹಿಮ್ಮತಸರ ಹಳ್ಳಿಯ ನಿವಾಸಿಗಳಾಗಿದ್ದ ಮಾಲಿ, ಪೂನಮ್(8), ರವೀನಾ(7), ರಾಧಾ(5) ಮತ್ತು ಸೇವಾರಾಂ(4) ಎಂಬ ಹೆಸರಿನ ಪುಟ್ಟ ಮಕ್ಕಳೇ ಆ ದುರ್ದೈವಿಗಳು.

ಮನೆಯಲ್ಲಿ ಯಾರೂ ಇಲ್ಲದಾಗ ತಮ್ಮ ಪಾಡಿಗೆ ತಾವು ಆಡಿಕೊಳ್ಳುತ್ತಿದ್ದ ಐವರು ಮಕ್ಕಳು, ತಳದಲ್ಲಿ ಮಾತ್ರ ಸ್ವಲ್ಪ ಧಾನ್ಯ ಇದ್ದ ಶೇಖರಣೆ ಪೆಟ್ಟಿಗೆಯನ್ನು ನೋಡಿದ್ದಾರೆ. ಆಟಕ್ಕೆಂದು ಒಬ್ಬರ ನಂತರ ಒಬ್ಬರು ಅದರೊಳಗೆ ಜಿಗಿದಿದ್ದಾರೆ. ನಂತರ ಆಕಸ್ಮಿಕವಾಗಿ ಅದರ ಮುಚ್ಚಳ ಹಾಕಿಕೊಂಡಿದೆ. ಮುಚ್ಚಳ ತೆರೆದು ಹೊರಬರಲಾಗದೆ ಮಕ್ಕಳ ಉಸಿರು ಕಟ್ಟಿದೆ.

ಹೊರಗಿನಿಂದ ಮನೆಗೆ ವಾಪಸಾದ ತಾಯಿ ಮಕ್ಕಳು ಇಲ್ಲದಿರುವುದನ್ನು ನೋಡಿ ಎಲ್ಲಾ ಕಡೆ ಹುಡುಕಿದ್ದಾಳೆ. ಹೀಗೇ ಹುಡುಕುತ್ತಿರುವಾಗ ಪೆಟ್ಟಿಗೆ ತೆರೆದು ನೋಡಿದಾಗ, ಮಕ್ಕಳು ಅದರೊಳಗೆ ಪ್ರಜ್ಞಾಹೀನವಾಗಿ ಬಿದ್ದಿರುವುದನ್ನು ನೋಡಿದ್ದಾಳೆ. ಕೂಡಲೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ವೈದ್ಯರು ಅದಾಗಲೇ ಮಕ್ಕಳು ಸಾವಪ್ಪಿದ್ದಾರೆಂದು ತಿಳಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಪ್ರೀತಿ ಚಂದ್ರ ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net