ಹೆಬ್ರಿ: ತಾಲೂಕಿನ ಚಾರ ನವೋದಯದ ಬಳಿ 70 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಸೇತುವೆ ಸಹಿತ ಕಿಂಡಿ ಅಣೆಕಟ್ಟಿನಲ್ಲಿ ನೀರು ಹರಿದು ಸಳ್ಳೆಕಟ್ಟೆ, ಕುಡಿಬೈಲ್ ಭಾಗದಲ್ಲಿ ಜಲಾವೃತವಾದ ಕೃಷಿ ಪ್ರದೇಶದಲ್ಲಿ ತಡೆಗೋಡೆ ನಿರ್ಮಾಣ ಕಾರ್ಯ ಮುಕ್ತಾಯಗೊಂಡಿದೆ.
ಸಣ್ಣ ನೀರಾವರಿ ಇಲಾಖೆಯವರು ಕೊನೆಯ ಹಂತದಲ್ಲಿ ತಡೆಗೋಡೆ ನಿರ್ಮಾಣ ಮಾಡದೇ ಇದ್ದಿದ್ದರಿಂದ, ನಿರ್ದಿಷ್ಟ ಜಾಗದಲ್ಲಿ ಬಾರಿ ಪ್ರಮಾಣದ ನೀರು ಒಳನುಸುಳುತ್ತಿತ್ತು. ಅಣೆಕಟ್ಟಿನ ಸೇತುವೆ ಸಮೀಪ ಪೈಪ್ ಪುಶಿಂಗ್ ವಿಧಾನದ ಮೂಲಕ ಸಂಗ್ರಹವಾಗುವ ಬೃಹತ್ ನೀರನ್ನು ಹೊರ ಹಾಕುವ ಪ್ರಕ್ರಿಯೆ ನಡೆಯುತ್ತಿದೆ. ಆದಷ್ಟು ಬೇಗ ಕಾಮಗಾರಿ ನಡೆದು 5 ಮೀಟರ್ ನೀರು ಅಣೆಕಟ್ಟಿನಲ್ಲಿ ನಿಲ್ಲುವಂತೆ ಮಾಡಲು ಸ್ಥಳೀಯರು ಆಗ್ರಹಿಸಿದ್ದಾರೆ. ಸದ್ಯಕ್ಕೆ 2.5 ಮೀಟರ್ ನೀರು ನಿಲ್ಲಿಸಲಾಗಿದ್ದು, ದಿನ ಕಳೆದಂತೆ ಸೀತಾ ನದಿಯಲ್ಲಿ ಹರಿವಿನ ಪ್ರಮಾಣ ಕಡಿಮೆಯಾಗಲಿದೆ. ಹೆಚ್ಚು ನೀರು ಶೇಖರಣೆಯಾಗಿ ಕೃಷಿ, ಅಂತರ್ಜಲ ಹೆಚ್ಚುವುದರಿಂದ ಸಣ್ಣ ನೀರಾವರಿ ಇಲಾಖೆಯವರನ್ನು ಎಚ್ಚರಿಸಿದ್ದಾರೆ.