ಬೆಂಗಳೂರು: ನಟ ಸಿಹಿಕಹಿ ಚಂದ್ರು ಕುರಿತ ಪ್ರಕರಣವೊಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಸಂಘಟನೆಯೊಂದು ಅವರ ವಿರುದ್ಧ ಪೊಲೀಸರಿಗೆ ದೂರು ನೀಡಿದೆ. ಮಾತ್ರವಲ್ಲ, ಸಿಹಿಕಹಿ ಚಂದ್ರು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿರುವ ಸಂಘಟನೆ, ಚಂದ್ರು ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೂಡ ಒತ್ತಾಯಿಸಿದೆ.
ಕರ್ನಾಟಕ ರಾಜ್ಯ ಕುಂಬಾರ ಸಂಘಗಳ ಒಕ್ಕೂಟದ ಕಾರ್ಯಾಧ್ಯಕ್ಷ ಡಾ.ಎಂ.ಪಿ. ವರ್ಷ ಎಂಬವರು ಸಿಹಿಕಹಿ ಚಂದ್ರು ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಚಂದ್ರು ಅವರು ಕುಂಬಾರ ಜನಾಂಗದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬುದಾಗಿ ಅವರು ಆರೋಪಿಸಿದ್ದಾರೆ.
ಸಿಹಿಕಹಿ ಚಂದ್ರು ಇದೇ ಏಪ್ರಿಲ್ 19ರಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಡಿಕೊಂಡಿರುವ ಪೋಸ್ಟ್ಗೆ ಕುಂಬಾರರನ್ನು ಅವಮಾನಿಸುವಂಥ ಕ್ಯಾಪ್ಷನ್ ಹಾಕಿಕೊಂಡಿದ್ದಾರೆ. ಈ ಮೂಲಕ ಅವರು ಜಾತಿನಿಂದನೆ ಎಸಗಿದ್ದಾರೆ. ಈ ಪೋಸ್ಟ್ನಲ್ಲಿ ಹಾಕಿಕೊಂಡಿರುವ ಆ ಸಾಲನ್ನು ಅವರು ತೆಗೆಯಬೇಕು, ಕುಂಬಾರ ಜನಾಂಗದ ಕ್ಷಮೆ ಯಾಚಿಸಬೇಕು. ಮಾತ್ರವಲ್ಲ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.