ಜಿಲ್ಲೆ

ಸರ್ಕಾರ ತೆಗೆಯಲು ಬಿಜೆಪಿಯವರು ಕಾಂಗ್ರೆಸ್​ ಶಾಸಕರಿಗೆ ತಲಾ 50 ಕೋಟಿ ಆಫರ್​ ಕೊಟ್ಟಿದ್ದಾರೆ: CM Siddaramaiah

Webdesk - Manjunatha B

ಮೈಸೂರು: ನಮ್ಮ ಸರ್ಕಾರ ಬೀಳಿಸಲು ಬಿಜೆಪಿಯವರು ಕಾಂಗ್ರೆಸ್​ನ ಶಾಸಕರಿಗೆ 50 ಕೋಟಿ ರೂಪಾಯಿ ಆಮಿಷ ಒಡ್ಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಆರೋಪಿಸಿದ್ದಾರೆ.

ಮೈಸೂರು ಜಿಲ್ಲೆ ತಿ. ನರಸೀಪುರ ತಾಲ್ಲೂಕಿನಲ್ಲಿ 470 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಿಎಂ (CM Siddaramaiah) ಈ ಬಾರಿ ಹೇಗಾದರೂ ಸಿದ್ಧರಾಮಯ್ಯ ಸರಕಾರವನ್ನು ಕಿತ್ತುಹಾಕಬೇಕು ಎಂದು ಬಿಜೆಪಿಯವರು ಕಾಂಗ್ರೆಸ್‌ನ 50 ಶಾಸಕರಿಗೆ ತಲಾ 50 ಕೋಟಿ ರೂ. ಆಫರ್ ನೀಡಿದ್ದರು. ಆದರೆ, ಅದಾಗಲಿಲ್ಲ ಎಂದು ನನ್ನ ಮೇಲೆ ಆರೋಪ ಹೊರಿಸಿ ಕಪ್ಪು ಮಸಿ ಬಳಿಯಲು ಯತ್ನಿಸುತ್ತಿದ್ದಾರೆ.

ಬಿಜೆಪಿ ಎಂದೂ ಸ್ವಂತ ಬಲದ ಮೇಲೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿಲ್ಲ, ಸಾಕಷ್ಟು ಭ್ರಷ್ಟಾಚಾರ ಮಾಡಿ ಲಂಚದಿಂದ ಕೋಟಿಗಟ್ಟಲೆ ಹಣ ಸಂಪಾದನೆ ಮಾಡಿದ್ದಾರೆ. ಆ ಹಣದಿಂದ ನಮ್ಮ 50 ಶಾಸಕರನ್ನು ಖರೀದಿ ಮಾಡಲು ಯತ್ನಿಸಿದ್ದರು. ಅವರು ಯಾರೂ ಹೋಗಲಿಲ್ಲ. ಹಾಗಾಗಿ ನನ್ನ ಮೇಲೆ ಮುಡಾ ಪ್ರಕರಣ ಎಂದು ಸುಳ್ಳು ಆರೋಪ ಮಾಡಿ ಕಪ್ಪು ಮಸಿ ಬಳಿಯಲು ಯತ್ನಿಸುತ್ತಿದ್ದಾರೆ.

ನನ್ನನ್ನ ಮುಟ್ಟಿದ್ರೆ ನಮ್ಮ ಕರ್ನಾಟಕದ ಜನ ಸುಮ್ಮನೆ ಬಿಡಲ್ಲ. ಎಲ್ಲಾ ವಿರೋಧ ಪಕ್ಷಗಳ ನಾಯಕರ ಸಿಎಂಗಳನ್ನ ಹೆದರಿಸುವ ಕೆಲಸವನ್ನು ಕೇಂದ್ರ ಸರಕಾರ ಮಾಡ್ತಿದೆ. ಇಡಿ, ಐಡಿ, ಸಿಬಿಐ (ED, IT, SBI) ಎಲ್ಲಾ ಅವರ ಕೈಯಲ್ಲಿದೆ. ಅವುಗಳನ್ನು ನಮ್ಮ ಮೇಲೆ ಛೂ ಬಿಡುವ ಕೆಲಸ ಮಾಡ್ತಿದ್ದಾರೆ. ನನ್ನ ಮೇಲೆ ಇರುವ ಕೇಸ್‌ಗಳು ಸುಳ್ಳು. ನಾನು 40 ವರ್ಷದಿಂದ ರಾಜಕಾರಣ ಮಾಡಿದ್ದೇನೆ. ಮಂತ್ರಿ, ಉಪ ಮುಖ್ಯಮಂತ್ರಿ, ವಿರೋಧ ಪಕ್ಷ ನಾಯಕ, ಸಿಎಂ ಎಲ್ಲವೂ ಆಗಿದ್ದೇನೆ. ಸಿದ್ದರಾಮಯ್ಯ 14 ಸೈಟ್‌ಗೆ ರಾಜಕಾರಣ ಮಾಡಬೇಕಿತ್ತಾ. ಜನರು ಮೂರ್ಖರೆಂದು ಬಿಜೆಪಿಯವರು ಭಾವಿಸಿದ್ದಾರೆ. ಜನರ ಬೆಂಬಲ ಇರುವವರೆಗೆ ನಾನು ಯಾವ ಕೇಸ್‌ಗೂ ಜಗ್ಗಲ್ಲ ಎಂದು ಹೇಳಿದ್ದಾರೆ.

ನನ್ನ ಕಂಡರೆ ಬಿಜೆಪಿಗೆ ಹೊಟ್ಟೆ ಉರಿ. ಬಡವರ ಪರ ಕೆಲಸ ಮಾಡ್ತಿನಿ ಎಂಬ ಕಾರಣಕ್ಕೆ ನನ್ನ ಇಳಿಸುವ ಪ್ರಯತ್ನ ಮಾಡ್ತಿದ್ದಾರೆ. ಸಿದ್ದರಾಮಯ್ಯ (Siddaramaiah) ಸರ್ಕಾರ ಉಳಿಯಬೇಕು. ಸಿದ್ದರಾಮಯ್ಯ ಸರ್ಕಾರ ಮುಂದುವರಿಯ ಬೇಕು ಎಂದು ಜನರೇ ಬಿಜೆಪಿಗೆ ಹೇಳಬೇಕು. ಲೂಟಿ ಹೊಡೆಯುವುದು, ಜಾತಿ ಮಾಡುವುದೇ ರಾಜಕಾರಣ ಎಂದು ಬಿಜೆಪಿ ತಿಳಿದಿದೆ. ಬಿಜೆಪಿ ಅವರು ಏನೂ ಅಭಿವೃದ್ಧಿ ಮಾಡಿದ್ದಾರೆ ಹೇಳಲಿ ನೋಡೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಿಪಕ್ಷಗಳಿಗೆ ಸವಾಲ್‌ ಎಸೆದಿದ್ದಾರೆ.