ಸುಟ್ಟಿದ್ದು ನಮ್ಮನೆ, ಜೀವ ಹೋಗಿದ್ದು ನಮ್ಮವರದ್ದು; UP CM ಯೋಗಿ ಹೇಳಿಕೆಗೆ ಸಚಿವ Priyank Kharge ತಿರುಗೇಟು

Priyank Kharge
Published on

ಬೆಂಗಳೂರು: ಮಹಾರಾಷ್ಟ್ರ ವಿಧಾನಸಭೆ ಚುನಾವಣಾ ಪ್ರಚಾರದ ವೇಳೆ ಉತ್ತರಪ್ರದೇಶ ಮುಖ್ಯಮಂತ್ರಿ  ಯೋಗಿ ಆದಿತ್ಯನಾಥ್​ (Yogi Adityanath) ಅವರು ಖರ್ಗೆಯವರ ತಾಯಿ, ಸಹೋದರಿ ಸುಟ್ಟು ಹೋದರೂ ಖರ್ಗೆ ಮೌನ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ವಿಚಾರ ರಾಷ್ಟ್ರ ರಾಜಕಾರಣದಲ್ಲಿ ಹೊಸ ಚರ್ಚೆಯನ್ನ ಹುಟ್ಟು ಹಾಕಿತ್ತು. ಇದೀಗ ಯೋಗಿ ಆದಿತ್ಯನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಚಿವೆ ಪ್ರಿಯಾಂಕ್​ ಖರ್ಗೆ (Priyank Kharge) ಯುಪಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಪ್ರಿಯಾಂಕ್​ ಖರ್ಗೆ, ಯೋಗಿ ಆದಿತ್ಯನಾಥ್ (Yogi Adityanath) ಅವರಿಗೆ ಖರ್ಗೆ ಸಾಹೇಬರ ಇತಿಹಾಸ ಗೊತ್ತಿಲ್ಲ. ರಜಾಕರು ನಮ್ಮನೆ ಸುಟ್ಟು ಹಾಕಿದರು. ಸುಟ್ಟಿದ್ದು ರಜಾಕರು, ಮುಸ್ಲಿಮರಲ್ಲ. ಸುಟ್ಟಿದ್ದು ನಮ್ಮನೆ, ಜೀವ ಹೋಗಿದ್ದು ನಮ್ಮವರದ್ದು, ಇದರಿಂದ ಯೋಗಿಗೆ ಏನಾಗಬೇಕು. ಆ ಉ  ಎಂದು ಪ್ರಶ್ನಿಸಿದ್ದಾರೆ.

ಬೇರೆ ಬೇರೆ ಸಮುದಾಯದ ಕೆಲವರಿಂದ ಮೋಸ ಆಗುತ್ತೆ ಎಂದು ಇಡೀ ಸಮುದಾಯವನ್ನು ಹೊಣೆ ಮಾಡಲಾಗುತ್ತಾ? ಮುಸ್ಲಿಮರಿಗೆಲ್ಲ ಆರೋಪ ಮಾಡಲು ಆಗುತ್ತಾ? ಇದೆಲ್ಲ ಈಗ ಅಪ್ರಸ್ತುತ ಚರ್ಚೆ. ಇಷ್ಟೆಲ್ಲಾ ಮಾತನಾಡುವ ಇವರು ದಲಿತರಿಗೆ ದೇವಸ್ಥಾನಗಳಿಗೆ ಪ್ರವೇಶ ಕೊಡುತ್ತಾರಾ. ಮೊದಲು ಬಿಜೆಪಿ, ಆರ್‌ಎಸ್‌ಎಸ್ ಸಿದ್ಧಾಂತಗಳಲ್ಲಿ ಸಮಾನತೆ ತರಲಿ. ಬಿಜೆಪಿಯವರು ಅಪಾಯದಲ್ಲಿದ್ದರೆ ಮಾತ್ರ ಆಗ ಹಿಂದೂಗಳು ಅಪಾಯದಲ್ಲಿದ್ದಾರೆ ಎಂದು ಬಿಂಬಿಸುತ್ತಾರೆ. ನಿಜಕ್ಕೂ ಅಪಾಯದಲ್ಲಿ ಇರೋರು ಬಿಜೆಪಿಯವರು, ಹಿಂದೂಗಳಲ್ಲ. ತಾವು ಅಪಾಯದಲ್ಲಿ ಇದ್ದಾಗ ಹಿಂದೂಗಳ ಹೆಸರು ಬಳಸಿಕೊಳ್ಳುತ್ತಾರೆ ಎಂದು ಸಚಿವ ಪ್ರಿಯಾಂಕ್​ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಯುಪಿ ಸಿಎಂ ಯೋಗಿ ಹೇಳಿದ್ದೇನು? 

ಮಹಾರಾಷ್ಟ್ರದ ಅಚಲಪುರದಲ್ಲಿ ಮಂಗಳವಾರ(ನ.12) ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಯುಪಿ ಸಿಎಂ ಯೋಗಿ ಆದಿತ್ಯನಾಥ್​, ಇತ್ತೀಚಿನ ದಿನಗಳಲ್ಲಿ ಮಲ್ಲಿಕಾರ್ಜುನ್​ ಖರ್ಗೆ ಅವರು ನನ್ನ ಮೇಲೆ ಕೋಪಗೊಳ್ಳುತ್ತಿದ್ದಾರೆ. ಖರ್ಗೆ ಜಿ, ನಾನು ನಿಮ್ಮ ವಯಸ್ಸಿಗೆ ಗೌರವ ನೀಡುತ್ತೇನೆ. ನನ್ನ ಮೇಲೆ ಕೋಪಗೊಳ್ಳಬೇಡಿ, ಒಂದು ವೇಳೆ ಕೋಪಗೊಳ್ಳುವುದಿದ್ದರೆ ರಜಾಕರ ಮೇಲೆ ಸಿಟ್ಟಾಗಿ. ನಿಜಾಮರು ನಿಮ್ಮ ಗ್ರಾಮವನ್ನು ಸುಟ್ಟು ಹಾಕಿದರು, ಹಿಂದುಗಳನ್ನು ಕ್ರೂರವಾಗಿ ಕೊಂದರು. ನಿಮ್ಮ ತಂದೆ, ತಾಯಿ, ಸಹೋದರಿ ಮತ್ತು ಕುಟುಂಬದ ಸದಸ್ಯರನ್ನು ಸುಟ್ಟರು. ಆದರೆ, ಖರ್ಗೆ ಅವರು ಇದನ್ನು ಹೇಳುವುದಿಲ್ಲ, ಈ ಮಾತುಗಳಾಡಿದರೆ ಮುಸ್ಲಿಂ ವೋಟ್​ಗಳು ನುಣುಚಿಕೊಳ್ಳುತ್ತವೆ. ಮತ ಬ್ಯಾಂಕ್​ಗಾಗಿ ಖರ್ಗೆ ಅವರು, ತಮ್ಮ ಕುಟುಂಬದ ತ್ಯಾಗವನ್ನೇ ಮರೆತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net