ಜಿಲ್ಲೆ

ಖಾಸಗಿ ಶಾಲೆಗಳಲ್ಲಿ ಅಡ್ಮಿಷನ್​ಗೆ ಗ್ರೀನ್​ ಸಿಗ್ನಲ್​: ಶಿಫ್ಟ್​ ವ್ಯವಸ್ಥೆಗೆ ವಿರೋಧ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ರಾಜ್ಯದ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರುಗಳ ಜತೆ ಶನಿವಾರ ಶೈಕ್ಷಣಿಕ ವಿಚಾರ ಕುರಿತು ಚರ್ಚೆ ನಡೆಸಿದರು.

ಚರ್ಚಾ ವೇಳೆ ಸಿಎಮ ಬಿಎಸ್​ವೈ ಬಳಿ ಪರಿಷತ್ ಸದಸ್ಯರು ಕೆಲವು ಮನವಿಗಳನ್ನು ಮಾಡಿಕೊಂಡರು. ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ ಕೂಡಲೇ ಬಾಕಿ ಉಳಿಸಿಕೊಂಡಿರೋ ಆರ್​ಟಿಇ ಹಣ ಬಿಡುಗಡೆ ಹಾಗೂ ಕೋವಿಡ್​ನಿಂದ ಸಂಬಳ ಆಗದೆ ಇರುವ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ಮತ್ತು ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ ಬಡ್ಡಿ ರಹಿತ ಸಾಲ ನೀಡುವುದರ ಜತೆಗೆ ಬಡ ಶಿಕ್ಷಕರಿಗೆ ಆಹಾರ ಕಿಟ್ ನೀಡಬೇಕೆಂದು ಕೇಳಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿ ಬಿಎಸ್​ವೈ ಈಗಾಗಲೇ ಆರ್​ಟಿಇ ಹಣವನ್ನು ಹಂತ ಹಂತವಾಗಿ ಬಿಡುಗಡೆ ಮಾಡಲು ಕ್ರಮ ವಹಿಸಲಾಗಿದೆ. ಎಲ್ಲಾ‌ ಶಾಲಾ-ಕಾಲೇಜುಗಳಿಗು ಸಂಬಳ ಬಿಡುಗಡೆ ಮಾಡಲು ಸೂಚನೆ ನೀಡಲಾಗುವುದು. ಬಡ ಶಿಕ್ಷಕರಿಗೆ ಕಿಟ್ ಕೊಡಲು ಕೂಡಲೇ‌ ನಿರ್ದೇಶಿಸಲಾಗುವುದು ಮತ್ತು ಉಳಿದ ಬೇಡಿಕೆಗಳನ್ನು ಅಧಿಕಾರಿಗಳ ಜತೆ ಚರ್ಚೆ ನಡೆಸಿ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.

ಖಾಸಗಿ ಶಾಲೆಗಳಲ್ಲಿ ಅಡ್ಮಿಷನ್​ಗೆ ಗ್ರೀನ್​ ಸಿಗ್ನಲ್​

ಖಾಸಗಿ ಶಾಲೆಗಳಲ್ಲಿ ಮಕ್ಕಳ ಅಡ್ಮಿಷನ್​ಗೆ ಸರ್ಕಾರ ಇಂದು ಹಸಿರು ನಿಶಾನೆ ತೋರಿದೆ. ಜೂನ್ ತಿಂಗಳಿಂದ ಶಾಲಾ ಅಡ್ಮಿಷನ್​ಗೆ ಸರ್ಕಾರದಿಂದ ಅನುಮತಿ ಸಿಕ್ಕಿದ್ದು, ಸಂಬಂಧ ಸದ್ಯದಲ್ಲೇ ಶಿಕ್ಷಣ ಇಲಾಖೆಯಿಂದ ಅಧಿಸೂಚನೆ ಪ್ರಕಟವಾಗಲಿದೆ. ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ ಸದಸ್ಯರ ನಿಯೋಗದ ಭೇಟಿ ವೇಳೆ ಸಿಎಂ ಅನುಮತಿ ನೀಡಿದ್ದಾರೆ.

ಶಿಫ್ಟ್​ ವ್ಯವಸ್ಥೆಗೆ ವಿರೋಧ

ಶಾಲೆಗಳಲ್ಲಿ ಪಾಳಿ ವ್ಯವಸ್ಥೆಯಲ್ಲಿ ತರಗತಿಗಳ ಆರಂಭಕ್ಕೆ ನಮ್ಮ ವಿರೋಧ ಇದೆ. ವಾಸ್ತವವಾಗಿ ಪಾಳಿ ತರಗತಿಗಳನ್ನು ನಡೆಸುವುದು ಕಷ್ಟಕರ. ಈ ಸಂಬಂಧ ಇನ್ನಷ್ಟು ಚರ್ಚಿಸುವುದಾಗಿ ಶಿಕ್ಷಣ ಸಚಿವರು ಹೇಳಿದ್ದಾರೆ. ಪಾಳಿ ಆಧಾರಿತ ತರಗತಿಗಳನ್ನು ನಡೆಸಲು ಸರ್ಕಾರ ಇನ್ನೂ ನಿರ್ಧರಿಸಿಲ್ಲ. ಇನ್ನೂ ಚರ್ಚೆಯ ಹಂತದಲ್ಲಿರುವುದಾಗಿ ಸಚಿವರು ಹೇಳಿದ್ದು, ಸರ್ಕಾರದ ಮುಂದಿನ ನಡೆಯನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ಕ್ಯಾಮ್ಸ್ ಅಧ್ಯಕ್ಷ ಶಶಿಕುಮಾರ್ ಹೇಳಿದರು.