ಬೆಂಗಳೂರು: ಸಿಎಂ ಬಿ.ಎಸ್. ಯಡಿಯೂರಪ್ಪ ತವರು ಪ್ರೇಮ ಮೆರೆದಿದ್ದು, ಗೌರಿ ಗಣೇಶ ಹಬ್ಬದ ವೇಳೆ ಕೆ.ಆರ್.ಪೇಟೆಗೆ ಬಂಪರ್ ಉಡುಗೊರೆ ಕೊಟ್ಟಿದ್ದಾರೆ.
ವಿಧಾನಸಭೆ ಉಪ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ ಸಿಎಂ ಯಡಿಯೂರಪ್ಪ ಕೃಷ್ಣರಾಜಪೇಟೆ ತಾಲೂಕಿನ 50 ಕೆರೆಗಳಿಗೆ ನೀರು ಹರಿಸುವ ಬೇಡಿಕೆ ಈಡೇರಿಸುವ ಮೂಲಕ ಹಬ್ಬಕ್ಕೆ ಗ್ಟಿಫ್ಟ್ ನೀಡಿದ್ದಾರೆ. ತಾಲೂಕಿನ 50 ಕೆರೆಗಳಿಗೆ ಹೇಮಾವತಿ ನದಿ ನೀರು ಹರಿಸುವ ಕುರಿತು ಸಂಪುಟ ಒಪ್ಪಿಗೆ ಪಡೆದ ಸಿಎಂ, ತವರು ಪ್ರೇಮ ಮೆರೆದಿದ್ದಾರೆ.
ಇದನ್ನೂ ಓದಿರಿ ಕೋರ್ಟ್ ಮುಂದೆ ತರಕಾರಿ ಮಾರಾಟಕ್ಕೆ ಕುಳಿತ ವಕೀಲರು!
ಹೇಮಾವತಿ ನದಿ ನೀರಿನಿಂದ ಏತ ನೀರಾವರಿ ಯೋಜನೆ ಮೂಲಕ ಬೂಕನಕೆರೆ ಮತ್ತು ಬರಪೀಡಿತ ಶೀಳನೆರೆ ಹೋಬಳಿಗಳ 50ಕ್ಕೂ ಹೆಚ್ಚಿನ ಕೆರೆಕಟ್ಟೆಗಳನ್ನು ತುಂಬಿಸುವ 265.29 ಕೋಟಿ ರೂ. ವೆಚ್ಚದ ಮಹತ್ವಾಕಾಂಕ್ಷಿ ಯೋಜನೆಗೆ ಸಂಪುಟ ಒಪ್ಪಿಗೆ ನೀಡುವ ಮೂಲಕ ಹಸಿರು ನಿಶಾನೆ ತೋರಿದೆ.
ಉಪ ಚುನಾವಣೆಯ ಸಂದರ್ಭದಲ್ಲಿ ಕೆ.ಆರ್. ಪೇಟೆ ಉಸ್ತುವಾರಿ ಹೊತ್ತಿದ್ದ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕೆರೆಗಳನ್ನು ತುಂಬಿಸುವ ಯೋಜನೆಯ ಬಗ್ಗೆ ಹೆಚ್ಚಿನ ಪ್ರಸ್ತಾಪ ಮಾಡಿದ್ದರು.
ಚುನಾವಣೆ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡ ಮುಖ್ಯಮಂತ್ರಿಗಳನ್ನು ಕ್ಷೇತ್ರದ ಜನರ ಪರವಾಗಿ ಸಚಿವ ನಾರಾಯಣಗೌಡ ಅಭಿನಂದಿಸಿದ್ದಾರೆ. ಮೂರು ತಿಂಗಳಲ್ಲಿ ಸರ್ವೇ ಕಾರ್ಯ ನಡೆಸಿ, ಯೋಜನಾ ವರದಿ ಸಿದ್ಧಪಡಿಸಲಾಗುವುದು. ಬಳಿಕ ಅತಿ ಶ್ರೀಘ್ರದಲ್ಲಿ ಕಾಮಗಾರಿ ಅನುಷ್ಠಾನ ಆಗಲಿದೆ ಎಂದು ನಾರಾಯಣಗೌಡ ಹೇಳಿದ್ದಾರೆ.