ಮೂಲ್ಕಿ: ನಗರದ ಸ್ವಚ್ಛತೆ ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಮಹತ್ವದ್ದು. ಸಾರ್ವಜನಿಕರು ಅವರ ಬಗ್ಗೆ ಗೌರವ ಭಾವನೆ ಹೊಂದುವುದು ಬಹಳ ಅಗತ್ಯ. ಪೌರಕಾರ್ಮಿಕರು ನಗರದ ಸ್ವಚ್ಛತಾ ಸೇನಾನಿಗಳಾಗಿದ್ದು, ಸ್ವಚ್ಛತೆ ಕಾಪಾಡುವಲ್ಲಿ ಪೌರ ಕಾರ್ಮಿಕರ ಶ್ರಮ ಅಪಾರ ಎಂದು ಮೂಲ್ಕಿ ನಗರ ಪಂಚಾಯಿತಿ ಮುಖ್ಯಾಧಿಕಾರಿ ಮಧುಕರ್ ಹೇಳಿದರು.
ಮೂಲ್ಕಿ ನಗರ ಪಂಚಾಯಿತಿ ವತಿಯಿಂದ ಸೋಮವಾರ ನಡೆದ ಪೌರಕಾರ್ಮಿಕರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪೌರಕಾರ್ಮಿಕರಾದ ಗಣೇಶ್, ರವಿ, ಶಾಂತಾ, ದೀಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪೌರಕಾರ್ಮಿಕರಿಗೆ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು ಹಾಗೂ ನಗರ ಪಂಚಾಯಿತಿ ಪೌರಕಾರ್ಮಿಕರನ್ನು ವಿಶೇಷವಾಗಿ ಗೌರವಿಸಲಾಯಿತು.
ನಗರ ಪಂಚಾಯಿತಿ ಆರೋಗ್ಯಾಧಿಕಾರಿ ರವಿಕೃಷ್ಣ, ಜೂನಿಯರ್ ಇಂಜಿನಿಯರ್ ಅಶ್ವಿನಿ ಮತ್ತಿತರರು ಉಪಸ್ಥಿತರಿದ್ದರು. ರೇಷ್ಮಾ ವಂದಿಸಿದರು.