ಜಿಲ್ಲೆ

ಕಸರತ್ತು ಮುಗಿಸಿದ 'ಸರ್ಕಸ್' ಕಲಾವಿದರು; ಇಲ್ಲಿ ನಾಯಕ ನಟನೇ ರಿಂಗ್ ಮಾಸ್ಟರ್​

ಬೆಂಗಳೂರು: ಈ ಸರ್ಕಸ್​ಗೆ ನಾಯಕ ನಟನೇ ರಿಂಗ್ ಮಾಸ್ಟರ್​. ಇದೀಗ ಈ ಸರ್ಕಸ್ ಕಲಾವಿದರು ತಮ್ಮ ಕಸರತ್ತು ಮುಗಿಸಿದ್ದಾರೆ. ಅರ್ಥಾತ್, ರೂಪೇಶ್​ ಶೆಟ್ಟಿ ನಾಯಕನಾಗಿ ಅಭಿನಯಿಸಿರುವ ಜತೆಗೆ ನಿರ್ದೇಶನವನ್ನೂ ಮಾಡಿರುವ 'ಸರ್ಕಸ್' ತುಳು ಚಲನಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ.

'ಗಿರ್ ​ಗಿಟ್' ಚಿತ್ರದ ಬಳಿಕ ನಟ ರೂಪೇಶ್ ಶೆಟ್ಟಿ 'ಸರ್ಕಸ್' ಸಿನಿಮಾ ನಿರ್ದೇಶನದಲ್ಲಿ ತೊಡಗಿಕೊಂಡಿದ್ದು, ಕರೊನಾತಂಕದ ನಡುವೆಯೂ ಸಿನಿತಂಡ ಚಿತ್ರೀಕರಣವನ್ನು ಮುಗಿಸಿದೆ. ಈ ಬಹುನಿರೀಕ್ಷಿತ ತುಳು ಚಿತ್ರದ ಶೂಟಿಂಗ್ ಮಂಗಳೂರು, ಮರವೂರು ಹಾಗೂ ಸುತ್ತಮುತ್ತಲ ಪರಿಸರದಲ್ಲಿ ಕಳೆದ 19 ದಿನಗಳಿಂದ ಸತತವಾಗಿ ನಡೆದಿದೆ. ಈ ಅವಧಿಯಲ್ಲಿ ಚಿತ್ರದ ಸಾಹಸ ದೃಶ್ಯವನ್ನು ಕೂಡ ಚಿತ್ರೀಕರಿಸಿಕೊಳ್ಳಲಾಗಿದೆ.

ಅನಿರೀಕ್ಷಿತವಾಗಿ ಬಂದ ಕರೊನಾ ಹಾಗೂ ಆ ಬಳಿಕದ ಕರ್ಫ್ಯೂ ನಡುವೆಯೂ ಎಲ್ಲ ನಿಯಮಗಳನ್ನು ಪಾಲಿಸಿ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಳಿಸಲಾಗಿದೆ. ಇನ್ನು ಹಾಡಿನ ದೃಶ್ಯಾವಳಿಯ ಶೂಟಿಂಗ್ ಮಾತ್ರ ಬಾಕಿ ಇದೆ ಎಂದು ನಟ-ನಿರ್ದೇಶಕ ರೂಪೇಶ್​ ಶೆಟ್ಟಿ ಹೇಳಿಕೊಂಡಿದ್ದಾರೆ.

ಈ ಚಿತ್ರದ ಮೂಲಕ ರಚನಾ ರೈ ನಾಯಕಿಯಾಗಿ ತುಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರೆ, ಯಶ್ ಶೆಟ್ಟಿ ಖಳನಾಗಿ ತುಳು ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದಾರೆ. ಕರಾವಳಿಯ ಖ್ಯಾತ ಹಾಸ್ಯನಟರಾದ ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ್ ಅವರ ಜತೆಗೆ ಭೋಜರಾಜ್ ವಾಮಂಜೂರ್, ಪ್ರಸನ್ನ ಶೆಟ್ಟಿ ಬೈಲೂರು ಮುಂತಾದವರು ಪ್ರಮುಖ ತಾರಾಗಣದಲ್ಲಿದ್ದಾರೆ.

ರೂಪೇಶ್ ಜತೆಗೆ ರಾಕೇಶ್ ಕದ್ರಿ ಕ್ರಿಯೇಟಿವ್ ಹೆಡ್ ಆಗಿ ಕೈಜೋಡಿಸಿರುವ ಈ ಚಿತ್ರಕ್ಕೆ ನಿರಂಜನ್ ದಾಸ್ ಛಾಯಾಗ್ರಹಣ, ನವೀನ್ ಶೆಟ್ಟಿ ನೃತ್ಯ ನಿರ್ದೇಶನ, ರಾಹುಲ್ ವಶಿಷ್ಠ ಸಂಕಲನ‌ವಿದೆ. ಆರ್.‌ಎಸ್.‌‌ಸಿನಿಮಾ, ಶೂಲಿನ್ ಫಿಲ್ಮ್ಸ್​ ಬ್ಯಾನರ್​ನಲ್ಲಿ ಅನಿಲ್ ಶೆಟ್ಟಿ, ಸುಧಾಕರ್ ಶೆಟ್ಟಿ ಮತ್ತು ಮಂಜುನಾಥ್ ಅತ್ತಾವರ್ ಜಂಟಿಯಾಗಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.