ವಿಜಯಪುರದ ತಾಯಿ ಮತ್ತು ಮಗುವಿನ ಆರೈಕೆ ಕೇಂದ್ರ. 
ಜಿಲ್ಲೆ

ಜಿಲ್ಲಾಸ್ಪತ್ರೆಯಲ್ಲಿ ಗಂಡು ಮಗು ಕಳ್ಳತನಕ್ಕೆ ಯತ್ನ?: ಸಿಕ್ಕಿ ಬಿದ್ದ ಮಹಿಳೆಯ ವಿಚಾರಣೆ

ವಿಜಯಪುರ: ಕಳೆದ ಕೆಲವು ದಿನಗಳ ಹಿಂದಷ್ಟೇ ಸಿಜೇರಿಯನ್ ಹೊಲಿಗೆ ಬಿಚ್ಚಿ ಸುಮಾರು 21 ಮಹಿಳೆಯರು ನರಳಾಡಿದ ಪ್ರಕರಣದ ತನಿಖೆ ಮುಂದುವರಿದಿರುವ ಬೆನ್ನಲ್ಲೇ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಮತ್ತೊಂದು ಯಡವಟ್ಟು ನಡೆದಿದೆ.

ಮಹಿಳೆಯೋರ್ವಳು ಮಗುವಿನ ಕಳ್ಳತನಕ್ಕೆ ಯತ್ನಿಸಿದ್ದಾಳೆಂಬ ಆರೋಪ ಕೇಳಿ ಬಂದಿದ್ದು, ಮಗುವಿನ ಪಾಲಕರು ಮಾಧ್ಯಮಗಳ ಮುಂದೆ ಅಲವತ್ತುಕೊಂಡಿದ್ದಾರೆ. ಇದರಿಂದ ಆಸ್ಪತ್ರೆ ಸಿಬ್ಬಂದಿ ಆರೋಪಿ ಮಹಿಳೆಯನ್ನು ವಿಚಾರಣೆಗೆಂದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಶುಕ್ರವಾರ ಬೆಳಗ್ಗೆ ಮುದ್ದೇಬಿಹಾಳ ಮೂಲದ ಬಸವರಾಜ ಮೇಟಿ ಎಂಬುವರ ಪತ್ನಿಯ ಹೆರಿಗೆ ಆಗಿದೆ. ಜಿಲ್ಲಾಸ್ಪತ್ರೆಯ ತಾಯಿ ಮತ್ತು ಮಗುವಿನ ಆರೈಕೆ ಕೇಂದ್ರದಲ್ಲಿ ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಲಾಗಿದೆ. ಸಂಜೆ 4ರ ಸುಮಾರಿಗೆ ಮಗುವಿನ ಆರೋಗ್ಯದಲ್ಲಿ ವ್ಯತ್ಯಯವಾಗಿದೆ. ಆಗ ಬಸವರಾಜ ಚೀಟಿ ಮಾಡಿಸಲೆಂದು ಹೊರ ಹೋಗಿದ್ದಾರೆ. ಈ ವೇಳೆ ತಾಯಿ ಮತ್ತು ಮಗುವಿನ ಪಕ್ಕದಲ್ಲಿದ್ದ ಮಹಿಳೆ ತನಗೆ ವೈದ್ಯರ ಪರಿಚಯವಿದ್ದು ಮಗುವನ್ನು ತೋರಿಸಿಕೊಂಡು ಬರುತ್ತೇನೆಂದು ತೆಗೆದುಕೊಂಡು ಹೋಗಿದ್ದಾಳೆ. ಬಳಿಕ ಅದೇನಾಗಿದೆಯೋ ಮಗುವನ್ನು ವಾಪಸ್ ತೆಗೆದುಕೊಂಡು ಬಂದಿದ್ದಾಳೆ. ಇದರಿಂದ ಸಂಶಯಗೊಂಡ ಆಸ್ಪತ್ರೆ ಸಿಬ್ಬಂದಿ ಯಾವುದಕ್ಕೂ ವಿಚಾರಣೆ ನಡೆಸಲು ಪೊಲೀಸರಿಗೆ ಮಹಿಳೆಯನ್ನು ಒಪ್ಪಿಸಿದ್ದಾರೆ.

ಪೊಲೀಸ್ ವಿಚಾರಣೆ: ಮಗು ಕಳ್ಳತನದ ಆರೋಪ ಹೊತ್ತ ಮಹಿಳೆಯನ್ನು ಗಾಂಧಿ ಚೌಕ ಠಾಣೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆದರೆ, ಪೊಲೀಸರು ಹೇಳುವ ಪ್ರಕಾರ ಮಗು ಕಳ್ಳತನಕ್ಕೆ ಸಂಬಂಧಿಸಿದಂತೆ ಯಾರೂ ಲಿಖಿತವಾಗಿ ದೂರು ನೀಡಿಲ್ಲ. ಅಲ್ಲದೆ ಮಹಿಳೆಯನ್ನು ವಿಚಾರಿಸಲಾಗಿ ಅಂಥ ಯಾವುದೇ ಕೃತ್ಯದಲ್ಲಿ ಭಾಗಿಯಾದ ಬಗ್ಗೆ ಖಚಿತ ಸುಳಿವು ಸಿಕ್ಕಿಲ್ಲ ಎಂದಿದ್ದಾರೆ.

ಪತ್ನಿಗೆ ಸಿಜೇರಿಯನ್ ಮಾಡಿಸಿದ್ದು, ಕೂಸು ಸುಸ್ತಾಗಿತ್ತು. ಚೀಟಿ ಮಾಡಿಸಲು ಹೋಗಿದ್ದಾಗ ಬ್ಯಾಕೋಡದ ಮಹಿಳೆಯೊಬ್ಬರು ಮಗು ತೆಗೆದುಕೊಂಡು ಹೋಗಿದ್ದರು. ಅವರು ಆಸ್ಪತ್ರೆಯಲ್ಲಿಯೇ ಕೆಲಸ ಮಾಡುತ್ತಿರಬೇಕೆಂದು ಸುಮ್ಮನಿದ್ದೆವು. ಬಳಿಕ ಮಗು ತಂದು ಕೊಟ್ಟಿದ್ದಾರೆ. ಇದೀಗ ಮಹಿಳೆಯನ್ನು ಪೊಲೀಸರು ವಿಚಾರಣೆಗೆ ಕರೆದೊಯ್ದಿದ್ದಾರೆ. | ಬಸವರಾಜ ಮೇಟಿ ಚಿರಚಿನಕಲ್ಲ, ಮುದ್ದೇಬಿಹಾಳ ತಾಲೂಕು ಮಗುವಿನ ಕಳ್ಳತನ ನಡೆದಿಲ್ಲ. ಮಗುವನ್ನು ತೆಗೆದುಕೊಂಡು ಹೋದ ಮಹಿಳೆ ವಾಪಸ್ ತಂದು ಬಿಟ್ಟಿದ್ದಾರೆ. ಆ ಮಹಿಳೆ ಯಾರು ಎಂಬುದರ ಬಗ್ಗೆ ಆಸ್ಪತ್ರೆಯ ವಾಚ್‌ಮನ್ ವಿಚಾರಿಸಿದ್ದಾರೆ. ಅವರು ಯಾರೆಂಬುದು ಗೊತ್ತಾಗಿಲ್ಲ. ಯಾವುದಕ್ಕೂ ವಿಚಾರಣೆ ನಡೆಸಲಿ ಎಂದು ಪೊಲೀಸರಿಗೆ ಒಪ್ಪಿಸಲಾಗಿದೆ. | ಡಾ.ಎಸ್.ಎನ್. ಲಕ್ಕಣ್ಣವರ ಜಿಲ್ಲಾ ಶಸ್ತ್ರ ಚಿಕಿತ್ಸಕ