ಜಿಲ್ಲೆ

ಕರೊನಾದಿಂದ ಗುಣವಾಗಲು ಪಾರಿಜಾತ ಎಲೆಯ ಕಷಾಯ ಕುಡಿಯುವಂತೆ ವಿನಯ್​ ಗುರೂಜಿ ಸೂಚನೆ

ಚಿಕ್ಕಮಗಳೂರು: ಮಹಾಮಾರಿ ಕರೊನಾ ವೈರಸ್​ನಿಂದ ರಕ್ಷಿಸಿಕೊಳ್ಳಲು ಪಾರಿಜಾತ ಎಲೆಯ ಕಷಾಯ ಕುಡಿಯುವಂತೆ ಗೌರಿಗದ್ದೆ ಆಶ್ರಮದ ಅವಧೂತ ವಿನಯ್​ ಗುರೂಜಿ ಅವರು ಭಕ್ತರಿಗೆ ಸಂದೇಶ ರವಾನಿಸಿದ್ದಾರೆ.

ಪಾರಿಜಾತ ಎಲೆಯ ಕಷಾಯ ಕುಡಿದರೆ ಕರೊನಾದಿಂದ ಗುಣ ಹೊಂದುತ್ತಾರೆ. 5 ಎಲೆ, ಕಾಳು ಮೆಣಸು ಹಾಗೂ ಶುಂಠಿ ಹಾಕಿ ಮಾಡಿದ ಕಷಾಯವನ್ನು ಕುಡಿಯಲು ಗುರೂಜಿ ಸೂಚನೆ ನೀಡಿದ್ದಾರೆ. ಕರೊನಾ ಇರುವವರು ಹಾಗೂ ಇಲ್ಲದವರು ಎಲ್ಲರೂ ಕುಡಿಯಿರಿ ಎಂದು ಗುರೂಜಿ ಹೇಳಿದರು.

ಮೂರು ದಿನಗಳ ಹಿಂದೆ ಹಾಸನದ ಚನ್ನರಾಯಪಟ್ಟಣದಲ್ಲಿ ಮಾತನಾಡಿದ್ದ ವಿನಯ್ ಗುರೂಜಿ, ಕರೋನಾ ಎರಡನೇ ಮತ್ತು ಮೂರನೇ ಅಲೆ ಬಗ್ಗೆ ಈ ಮೊದಲೇ ನಾನು ಹೇಳಿದ್ದೆ. ಮೂರನೇ ಅಲೆ ಬರುವ ಮೊದಲೇ ನಾವು ಎಚ್ಚೆತ್ತು ಕೊಳ್ಳಬೇಕಿದೆ. ಸೊಳ್ಳೆಯನ್ನ ಹೋಗಲಾಡಿಸಲು ಆಗಲ್ಲ. ಆದ್ರೆ ಸೊಳ್ಳೆ ಬಾರದಂತೆ ಪರದೆ ಹಾಕಿಕೊಳ್ಳಬಹುದು ಅದೇ ನಿಜ ಸ್ಥಿತಿ ಎನ್ನುವ ಮೂಲಕ ಕರೊನಾ ತಗುಲದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು. ಅಗ್ನಿಹೋತ್ರ, ಯೋಗ, ‌ರಾಸಾಯನಿಕ ಮುಕ್ತ ಜೀವನ ಪಾಲನೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

2020ರ ಮೇ ನಲ್ಲೂ ಕರೊನಾ ಕುರಿತು ಮಾತನಾಡಿದ್ದ ವಿನಯ್​ ಗುರೂಜಿ, ನಾವು ಇನ್ನೂ ಎರಡು ವರ್ಷ ಗಾಂಧೀಜಿ ಅವರು ಹೇಳಿದಂತೆ ಸರಳ ಜೀವನ ನಡೆಸಬೇಕು. ಇಲ್ಲದವರಿಗೆ ಇದ್ದವರು ಸಹಾಯ ಮಾಡಬೇಕು. ಪ್ರವಾಸ, ಶಾಪಿಂಗ್ ಎಂದು ವೃಥಾ ಖರ್ಚು ಮಾಡುವ ಬದಲು ಅಗತ್ಯವಿರುವ ಧಾನ್ಯವನ್ನು ಸಂಗ್ರಹಿಸಿಕೊಳ್ಳೋಣ. 10ರಿಂದ 11 ಜತೆ ಬಟ್ಟೆಗಳ ಖರೀದಿ ಮಾಡುವ ಬದಲು 3 ರಿಂದ 4 ಜತೆ ಖರೀದಿಸೋಣ. ಎಲ್ಲವನ್ನೂ ಸರ್ಕಾರವೇ ಮಾಡಲಿ ಎಂದು ಕುಳಿತುಕೊಳ್ಳಬಾರದು. ನಮ್ಮ ಕೈಲಾದಷ್ಟು ಸಹಾಯವನ್ನು ಬಡವರಿಗೆ ಮಾಡಬೇಕು ಎಂದಿದ್ದರು.