ಜಿಲ್ಲೆ

ರಸ್ತೆಯಲ್ಲೇ ನರಳಾಡಿ ಪ್ರಾಣ ಬಿಟ್ಟ ಹೆಲ್ತ್​ ಇನ್ಸ್​ಪೆಕ್ಟರ್​: ಕಾರಿನಲ್ಲೇ ಕುಳಿತಿದ್ದ ಶಾಸಕರ ನಡೆಗೆ ಆಕ್ರೋಶ

ಚಿಕ್ಕಮಗಳೂರು: ಬೈಕ್​ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಅರ್ಧಗಂಟೆ ರಸ್ತೆಯಲ್ಲೇ ನರಳಾಡಿ ಕರೊನಾ ವಾರಿಯರ್ಸ್​ ಪ್ರಾಣ ಬಿಟ್ಟಿರುವ ಘಟನೆ ತರೀಕೆರೆಯ ಲಕ್ಕವಳ್ಳಿ ಕ್ರಾಸ್​ನಲ್ಲಿ ನಡೆದಿದೆ. ಘಟನಾ ಸ್ಥಳಕ್ಕೆ ಮುಂಚೆಯೇ ಬಂದರೂ ಸಮಯ ಪ್ರಜ್ಞೆ ಮೆರೆಯದ ಬಿಜೆಪಿ ಶಾಸಕ ಸುರೇಶ್ ನಡೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಮೃತಪಟ್ಟ ಕರೊನಾ ವಾರಿಯರ್​ನನ್ನು ರಮೇಶ್​ ಎಂದು ಗುರುತಿಸಲಾಗಿದೆ. ಹೆಲ್ತ್​ ಇನ್ಸ್​ಪೆಕ್ಟರ್​ ಆಗಿ ಕೆಲಸ ಮಾಡುತ್ತಿದ್ದ ರಮೇಶ್​, ನಿನ್ನೆ ಕರೊನಾ ಕರ್ತವ್ಯ ಮುಗಿಸಿ ಬರುವಾಗ ಅಪರಿಚಿತ ವಾಹನ ಡಿಕ್ಕಿಯಾಗಿತ್ತು.

ಇದೇ ವೇಳೆ ಶಾಸಕ ಸುರೇಶ್​ ಅವರ ಕಾರು ಅಲ್ಲಿಗೆ ಬಂದಿತ್ತು. ಆಂಬ್ಯುಲೆನ್ಸ್​ ಕರೆ ಮಾಡಿದರೂ ಅರ್ಧ ಗಂಟೆಯಾದ್ರೂ ಬರಲೇ ಇಲ್ಲ. ಇತ್ತ ರಮೇಶ್​ ರಕ್ತದ ಮಡುವಿನಲ್ಲಿ ನರಳಾಡುತ್ತಿದ್ದರೂ ಶಾಸಕರು ಮಾತ್ರ ಕಾರು ನಿಲ್ಲಿಸಿಕೊಂಡು ಕಾರಿನೊಳಗಡೆಯೇ ಕುಳಿತಿದ್ದರು.

ತಡವಾಗಿ ಬಂದ ಆಂಬ್ಯುಲೆನ್ಸ್​ನಲ್ಲಿ ಶಿವಮೊಗ್ಗ ಆಸ್ಪತ್ರೆಗೆ ರವಾನಿಸುವ ಮಾರ್ಗ ಮಧ್ಯೆ ರಮೇಶ್​ ಕೊನೆಯುಸಿರೆಳೆದಿದ್ದಾರೆ. ಶಾಸಕರು ಸಮಯ ಪ್ರಜ್ಞೆ ಮೆರೆದಿದ್ದರೆ ರಮೇಶ್​ ಜೀವ ಉಳಿಯುತ್ತಿತ್ತು. ಕೇವಲ ಎರಡು ನಿಮಿಷದ ಪ್ರಯಾಣದ ಅಂತರದಲ್ಲೇ ಆಸ್ಪತ್ರೆ ಇತ್ತು. ಆದರೆ, ಶಾಸಕರ ನಿರ್ಲಕ್ಷ್ಯದಿಂದ ಒಬ್ಬ ಕರೊನಾ ವಾರಿಯರ್​ನನ್ನು ಕಳೆದುಕೊಂಡಂತಾಗಿದೆ. (ದಿಗ್ವಿಜಯ ನ್ಯೂಸ್​)