ಬೆಳಗಾವಿ: ಕಾವಿ-ಖಾಕಿಯ ಸಂಘರ್ಷದ ಕಾವು ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೇ ಬಿಸಿ ಮುಟ್ಟಿಸುವ ರೀತಿಯಲ್ಲಿ ಪರಿಣಮಿಸಿದೆ. ಎಷ್ಟರಮಟ್ಟಿಗೆ ಎಂದರೆ, ಇನ್ನೊಂದೇ ತಿಂಗಳಲ್ಲಿ ಅವರು ಸಿಎಂ ಸ್ಥಾನದಿಂದ ಕೆಳಗಿಳಿಯಲಿದ್ದಾರಂತೆ. ಹಾಗಂತ ಇದು ಸಿಎಂ ಕುರಿತು ಯಾರೋ ಹೇಳಿರುವ ಭವಿಷ್ಯವಲ್ಲ, ಬದಲಿಗೆ ಸ್ವಾಮೀಜಿಯೊಬ್ಬರು ಮುಖ್ಯಮಂತ್ರಿಗೆ ಹಾಕಿರುವ ಶಾಪ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇಂಥದ್ದೊಂದು ಶಾಪ ಹಾಕಿದ ಸ್ವಾಮೀಜಿ ಬೇರಾರೂ ಅಲ್ಲ, ಕೂಡಲಸಂಗಮದ ಬಸವ ಧರ್ಮ ಪೀಠದ ಬಸವಪ್ರಕಾಶ ಸ್ವಾಮೀಜಿ. ಇಂದು ಸುದ್ದಿಗಾರರರ ಜತೆ ಮಾತನಾಡುತ್ತ ಖುದ್ದು ಸ್ವಾಮೀಜಿಯವರೇ ಈ ವಿಷಯನ್ನು ಹೇಳಿದರು.
ಸರ್ಕಾರ ನಮ್ಮ ಮೇಲೂ ಪೊಲೀಸರನ್ನು ಛೂ ಬಿಟ್ಟು ಸತಾಯಿಸುತ್ತಿದೆ. ಖಾಕಿಧಾರಿಗಳ ಮೂಲಕ ಕಾವಿಧಾರಿಗಳ ಮೇಲೆ ಸರ್ಕಾರ ಎಸಗಿರುವ ಈ ಅಪಚಾರವನ್ನು ಲಿಂಗಾಯತ ಸಮುದಾಯ ಸಹಿಸಿಕೊಳ್ಳುವುದಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಲೇ ಅವರು ಸಿಎಂಗೆ ಶಾಪ ಹಾಕಿದ್ದಾರೆ.
ನಾವು ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಹೋಗುವ ಸಂದರ್ಭದಲ್ಲಿ ಪೊಲೀಸರು ನಮ್ಮ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. ಪೊಲೀಸರು ನಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಎಲ್ಲವನ್ನೂ ತೊರೆದು ಬಂದ ನಮಗೆ ಪೊಲೀಸರು ಅಕ್ಕ-ತಂಗಿಯರನ್ನು ಹಚ್ಚಿ ಬೈದಿದ್ದಾರೆ ಎಂದು ಸ್ವಾಮೀಜಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕನ್ನಡದ ಬಾವುಟ, ಸಂಗೊಳ್ಳಿ ರಾಯಣ್ಣ ಬಳಿಕ ಈಗ ಬಸವಣ್ಣಂಗೂ ಅಪಮಾನ; ಭಾವಚಿತ್ರಕ್ಕೆ ಸೆಗಣಿ ಎಸೆದ ದುಷ್ಕರ್ಮಿಗಳು..
ನಮ್ಮಂಥ ಸ್ವಾಮೀಜಿಗಳಿಗೇ ಈ ರೀತಿ ಮಾಡಿದವರಿಗೆ ನಮ್ಮ ಶಾಪ ತಟ್ಟದೇ ಬಿಡುವುದಿಲ್ಲ. ಖಂಡಿತ ನಮ್ಮ ಶಾಪ ತಟ್ಟಿಯೇ ತಟ್ಟುತ್ತದೆ, ಇನ್ನೊಂದು ತಿಂಗಳಲ್ಲಿ ಬಸವರಾಜ ಬೊಮ್ಮಾಯಿ ಅವರು ಸಿಎಂ ಸ್ಥಾನದಿಂದ ಕೆಳಗಿಳಿದೇ ಇಳಿಯುತ್ತಾರೆ ಎಂದು ಸ್ವಾಮೀಜಿ ಹೇಳಿದರು.